ಶ್ರೀನಗರ: ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ (ಜೆಕೆಪಿಸಿ) ಅಧ್ಯಕ್ಷ ಸಜ್ಜಾದ್ ಗಣಿ ಲೋನ್, ತಮ್ಮ ಪಕ್ಷವು ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ನಿಂದ ಹೊರಬಂದಿದೆ ಎಂದು ತಿಳಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಸೇರಿದಂತೆ ಏಳು ಪ್ರಮುಖ ಪಕ್ಷಗಳು ಪಿಎಜಿಡಿ ಬ್ಯಾನರ್ ಅಡಿಯಲ್ಲಿ ಕೈಜೋಡಿಸಿ ಕಳೆದ ವರ್ಷ 110 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಡಿಸಿ ಚುನಾವಣೆ ಮುನ್ನಡೆಸಿದ್ದವು. ಮೈತ್ರಿಕೂಟದ ಗಮನಾರ್ಹ ಪ್ರದರ್ಶನದ ಹೊರತಾಗಿಯೂ, ಲೋನ್ ಪಿಎಜಿಡಿಯೊಂದಿಗಿನ ತಮ್ಮ ಪಕ್ಷದ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ.
ಪಿಎಜಿಡಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರಿಗೆ ಬರೆದ ಪತ್ರದಲ್ಲಿ, ಪಕ್ಷದ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಭೆ ನಡೆಸಿದ ನಂತರ ಮೈತ್ರಿಯಿಂದ ಹೊರಬರಲು ನಿರ್ಧರಿಸಲಾಯಿತು. ಒಕ್ಕೂಟದಲ್ಲಿ ವಿಶ್ವಾಸದ ಉಲ್ಲಂಘನೆಯಾಗಿದೆ ಎಂದು ನಾವು ತಿಳಿದುಕೊಂಡಿದ್ದೇವೆ ಎಂದು ಲೋನ್ ಉಲ್ಲೇಖಿಸಿದ್ದಾರೆ.
ಕಾಶ್ಮೀರದ ಹಲವಾರು ಪಕ್ಷಗಳನ್ನು ತನ್ನ ಘಟಕಗಳಾಗಿ ಹೊಂದಿರುವ ಪಿಎಜಿಡಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ಮತ್ತು ರಾಜ್ಯತ್ವವನ್ನು ಪುನಃಸ್ಥಾಪಿಸಲು ಒತ್ತಾಯಿಸುತ್ತಿದೆ. ಸಂವಿಧಾನದ 370 ನೇ ವಿಧಿಯನ್ನು ಹಿಂತೆಗೆದುಕೊಂಡ ಮೊದಲ ವಾರ್ಷಿಕೋತ್ಸವದ ಕೆಲವು ದಿನಗಳ ಮುಂಚೆಯಷ್ಟೇ ಸುಮಾರು ಒಂದು ವರ್ಷದ ಅವಧಿಯ ಬಂಧನದಿಂದ ಅಂದರೆ ಕಳೆದ ಜುಲೈನಲ್ಲಿ ಲೋನ್ ಬಿಡುಗಡೆಯಾಗಿದ್ದರು.