ನವದೆಹಲಿ: ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರ ಆರು ದಿನಗಳ ರಿಮಾಂಡ್ ಅವಧಿ ಇಂದು ಕೊನೆಗೊಂಡಿದೆ. ಆರು ದಿನಗಳ ರಿಮಾಂಡ್ ಅವಧಿಯಲ್ಲಿ, ಆರೋಪಿ ಸುಶೀಲ್ ಕುಮಾರ್ನ ಆರು ಸಹಚರರನ್ನು ಬಂಧಿಸಲಾಗಿದೆ. ಆದರೆ ಇನ್ನುಳಿದ 10ಕ್ಕೂ ಹೆಚ್ಚು ಆರೋಪಿಗಳು ಪರಾರಿಯಾಗಿದ್ದಾರೆ.
ಸುಶೀಲ್‌ಗೆ ಇನ್ನೂ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದ್ದರಿಂದ, ರಿಮಾಂಡ್ ಅವಧಿಯನ್ನು ಎರಡು ಮೂರು ದಿನಗಳವರೆಗೆ ವಿಸ್ತರಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
ಮೇ 4ರ ತಡರಾತ್ರಿ ಛತ್ರಸಾಲ್ ಕ್ರೀಡಾಂಗಣದಲ್ಲಿ ಸಾಗರ್ ರಾಣಾ ಮತ್ತು ಆತನ ಗೆಳೆಯರನ್ನು ಕ್ರೂರವಾಗಿ ಥಳಿಸಲಾಗಿತ್ತು. ಇದರ ವಿಡಿಯೋ ಕೂಡ ವೈರಲ್ ಆಗಿದ್ದು, ವಿಡಿಯೋದಲ್ಲಿ ಸುಶೀಲ್ ಕುಮಾರ್ ಕೈಯಲ್ಲಿ ಕೋಲು ಹಾಗೂ ಇನ್ನೊಬ್ಬ ಆರೋಪಿಯ ಕೈಯಲ್ಲಿ ಪಿಸ್ತೂಲ್ ಕಾಣಬಹುದಾಗಿದೆ. ಹಲ್ಲೆ ಬಳಿಕ ಸಾಗರ್ ರಾಣಾನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆತನ ಇನ್ನಿಬ್ಬರು ಗೆಳೆಯರು ಗಾಯಗೊಂಡಿದ್ದಾರೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ನನ್ನು ಘಟನೆಯಲ್ಲಿ ಮುಖ್ಯ ಆರೋಪಿಯನ್ನಾಗಿ ಗುರುತಿಸಲಾಗಿದ್ದು, ಈ ಘಟನೆಯಲ್ಲಿ 15ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗಿಯಾಗಿದ್ದರು.