ಹೈದರಾಬಾದ್(ತೆಲಂಗಾಣ): ದೀಪಾವಳಿ ಪ್ರಯುಕ್ತ ಮುತ್ತಿನ ನಗರಿಯಲ್ಲಿ ಈ ಬಾರಿಯೂ ಸದರ್ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಯಾದವ ಸಮುದಾಯ ಸರ್ವ ಸಿದ್ಧತೆ ಮಾಡಿಕೊಂಡಿದೆ. ಖೈರತಾಬಾದ್‌ನ ದೂದ್ವಾಲಾ ಸಂಘಟಕ ಮಧು ಯಾದವ್ ಇದರ ನೇತೃತ್ವ ವಹಿಸಿದ್ದಾರೆ. ಪುರಸಭೆ ಮೈದಾನದ ದೊಡ್ಡ ಗಣೇಶ ಪ್ರತಿಮೆ ಎದುರು ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.
ಇದು ಅತ್ಯಂತ ಅದ್ಧೂರಿ ಉತ್ಸವವಾಗಿದ್ದು, ಅಪರೂಪದ ನಾನಾ ತಳಿಯ ಕೋಣಗಳು ಇಲ್ಲಿ ವಿಶೇಷ ಆಕರ್ಷಣೆಯಾಗಿದ್ದವು. ಮಂಗಳವಾರ ಈ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಸದರ್ ಉತ್ಸವಕ್ಕೆ ಮಧು ಯಾದವ್ ಕೋಣಗಳನ್ನು ಖರೀದಿಸಿ ತಮ್ಮ ಡೈರಿ ಫಾರ್ಮ್‌ನಲ್ಲಿ ದಷ್ಟಪುಷ್ಟವಾಗಿ ಬೆಳೆಸಿದ್ದಾರೆ. ಕೋಣಗಳಾದ ರಾಜು ಮತ್ತು ಗರುಡ ಎಲ್ಲರನ್ನೂ ಆಕರ್ಷಿಸುತ್ತಿದ್ದು, ಪ್ರದರ್ಶನದಲ್ಲಿ ಗಮನ ಸೆಳೆದವು.
ಹರಿಯಾಣ ರಾಜು : 20 ದಿನಗಳ ಹಿಂದೆ ಹರಿಯಾಣದಿಂದ ಮುರ್ರಾ ತಳಿಯ ರಾಜು ಹೆಸರಿನ ಕೋಣಕ್ಕೆ ಬರೋಬ್ಬರಿ 35 ಕೋಟಿ ರೂಪಾಯಿ ನೀಡಿ, ಹೈಮದ್ ಆಲಂ ಖಾನ್ ಎಂಬ ಮಾಲೀಕನಿಂದ ಖರೀದಿಸಿ ತಂದಿದ್ದೇವೆ. ವೀರ್ಯದ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ನಿರ್ಧಾರವಾಗುತ್ತದೆ ಎಂದು ಮಾಲೀಕ ಮಧು ತಿಳಿಸಿದ್ದಾರೆ.
ಗರುಡ ಕೋಣ: ಪ್ರಸ್ತುತ ಡೈರಿ ಫಾರ್ಮ್‌ನಲ್ಲಿರುವ ಮುರ್ರಾ ತಳಿ ಗರುಡ ವೀರ್ಯದ ಒಂದು ಹನಿಗೆ 1,200 ರಿಂದ 1,500 ರೂಪಾಯಿ ಇದೆ. ರಾಜ್ಯದಲ್ಲಿ ಮುರ್ರಾ ತಳಿ ಎಮ್ಮೆಗಳಿಗೂ ಬೇಡಿಕೆ ಇದ್ದು, ಈ ತಳಿ ಬೆಳವಣಿಗೆಗೆ ನೆರವಾಗುವ ಕೆಲಸ ಮಾಡುತ್ತಿದ್ದೇನೆ ಎಂದು ಮಧು ಮಾಹಿತಿ ನೀಡಿದರು.
ಹೀಗಿರುತ್ತೆ ಪ್ರತಿದಿನದ ಆರೈಕೆ.. ಈಗಾಗಲೇ ರಾಜು, ಗರುಡನಿಗೆ ಪ್ರತಿದಿನ ಹಾಲು, ಪಿಸ್ತಾ, ಬಾದಾಮಿ, ಗೋಡಂಬಿ, ಸೇಬು, ಕೋಳಿ ಮೊಟ್ಟೆ, ಕಡಲೆ, ಮೆಂತ್ಯ, ಶೇಂಗಾ, ಕ್ಯಾರೆಟ್, ಬೀಟ್‌ರೂಟ್‌ಗಳನ್ನು ನೀಡಲಾಗುತ್ತಿದೆ ಎಂದು ಮಾಲೀಕ ಮಧು ಯಾದವ್ ವಿವರಿಸಿದರು.
ಕೋವಿಡ್ ಅವಧಿಯಲ್ಲಿ ಕಳೆಗುಂದಿದ್ದ ಉತ್ಸವ.. ಈ ಹಿಂದೆ ಕೊರೊನಾ ಸೋಂಕಿನ ಹಾವಳಿ ಇದ್ದ ಪರಿಣಾಮ ಎರಡು ವರ್ಷಗಳಿಂದ ಸದರ್ ಉತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು.