ಮುಂಬೈ : ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸ್ಕಾರ್ಪಿಯೊ ಕಾರಿನಲ್ಲಿ ಬೆದರಿಕೆ ಪತ್ರ ಮತ್ತು ಸ್ಫೋಟಕ ವಸ್ತುಗಳನ್ನಿಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಮಾರ್ಚ್ 13 ಶನಿವಾರ ಬೆಳಗ್ಗೆ 11:30ಕ್ಕೆ ದಕ್ಷಿಣ ಮುಂಬೈನ ಕುಂಬಲ್ಲಾ ಬೆಟ್ಟದಲ್ಲಿರುವ ಎನ್ಐಎ ಕಚೇರಿಗೆ ಹಾಜರಾಗುವಂತೆ ಸಚಿನ್ ವಾಜೆಗೆ ಸಮನ್ಸ್ ನೀಡಲಾಗಿತ್ತು. ಸುಮಾರು 12 ಗಂಟೆಗಳ ವಿಚಾರಣೆಯ ಬಳಿಕ ರಾತ್ರಿ ವಾಜೆಯನ್ನು ಬಂಧಿಸಲಾಗಿತ್ತು. ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿಸಿ ನಿಲ್ಲಿಸಲಾಗಿದ್ದ ವಾಹನ ಮಾಲೀಕ ಉದ್ಯಮಿ ಮನ್ಸುಖ್ ಹಿರೆನ್ ಮೃತದೇಹ ಮಾರ್ಚ್ 5 ರಂದು ಥಾಣೆಯ ಕೊಲ್ಲಿನಲ್ಲಿ ಪತ್ತೆಯಾಗಿತ್ತು. ಶವವಾಗಿ ಪತ್ತೆಯಾಗುವುದಕ್ಕೂ ಮುನ್ನ ತನ್ನ ವಾಹನ ಒಂದು ವಾರಕ್ಕಿಂತ ಮುಂಚೆಯೇ ಕಳುವಾಗಿತ್ತು ಎಂದು ಮನ್ಸುಖ್ ಹಿರೇನ್ ಹೇಳಿಕೊಂಡಿದ್ದ. ಹೀಗಾಗಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎನ್ಐಎ ತನಿಖೆ ಮುಂದುವರೆಸಿತ್ತು.
ಈಗ ಸ್ಕಾರ್ಪಿಯೊ ಕಾರಿನಲ್ಲಿ ಸ್ಫೋಟಕ ವಸ್ತು ಮತ್ತು ಬೆದರಿಕೆ ಪತ್ರ ಇಟ್ಟಿರುವುದಾಗಿ ವಾಜೆ ಎನ್ಐಎ ಮುಂದೆ ಬಾಯ್ಬಿಟ್ಟಿದ್ದಾರೆ. ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ವಾಜೆ ತಂಗಿದ್ದರು. ಆ ಬಿಲ್ನ್ನು ಚಿನ್ನದ ವ್ಯಾಪಾರಿ ಪಾವತಿಸಿದ್ದಾನೆ ಎಂದು ಆರೋಪಿ ವಾಜೆ ಒಪ್ಪಿಕೊಂಡಿದ್ದಾರೆ.
ಎನ್ಐಎ ವಿಚಾರಣೆ ವೇಳೆ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ಮುಖೇಶ್ ಅಂಬಾನಿ ಕುಟುಂಬಕ್ಕೆ ಸುಲಿಗೆಯ ಬೆದರಿಕೆ ಪತ್ರ ಇಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈಗಾಗಲೇ ಸಚಿನ್ ವಾಜೆ ಅವರ ಎರಡು ಮರ್ಸಿಡಿಸ್, ಪ್ರಡೋ ಸೇರಿದಂತೆ ಪೊಲೀಸರು ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು.
ಸಚಿನ್ ವಾಜೆ ಅವರು ಎನ್ಐಎ ಕಸ್ಟಡಿ ಇಂದು ಕೊನೆಗೊಳ್ಳಲಿದ್ದು, ಇಂದು ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರಿ ಪಡಿಸಲಿರುವ ಎನ್ಐಎ ಮತ್ತೆ ವಾಜೆಯನ್ನು ನ್ಯಾಯಾಂಗ ಬಂಧನಕ್ಕೆ ಪಡೆಯುವ ಸಾಧ್ಯತೆಯಿದೆ.