ನವದೆಹಲಿ : ಬಹುನಿರೀಕ್ಷಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎಸ್-400 (S-400) ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ ಅನ್ನು ಭಾರತಕ್ಕೆ ರಫ್ತು ಮಾಡಲು ಆರಂಭಿಸಲಾಗಿದೆ ಎಂದು ರಷ್ಯಾದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಿಲಿಟರಿ-ತಾಂತ್ರಿಕ ಕೋ-ಅಪರೇಷನ್ ಫೆಡರಲ್ ಸರ್ವಿಸ್ (ಎಫ್‌ಎಸ್‌ಎಂಟಿಸಿ) ನಿರ್ದೇಶಕ ಡಿಮಿಟ್ರಿ ಶುಗೇವ್ ಈ ಕುರಿತು ಸ್ಪುಟ್ನಿಕ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ರಫ್ತು ಕಾರ್ಯಗಳು ಯೋಜಿಸಿದಂತೆ ನಡೆಯುತ್ತಿವೆ. ನಿಗದಿತ ಸಮಯದಲ್ಲಿ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ರಷ್ಯಾ ಪೂರೈಸುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಕ್ಟೋಬರ್ 2018ರಲ್ಲಿ ಭಾರತವು ಎಸ್-400 ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ಕೊಳ್ಳಲು ರಷ್ಯಾದೊಂದಿಗೆ 5 ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು.
ಈ ವೇಳೆ ಅಮೆರಿಕದಲ್ಲಿ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಭಾರತಕ್ಕೆ ನಿರ್ಬಂಧದ ಎಚ್ಚರಿಕೆಯನ್ನು ಹಾಕಿದ್ದರು. ಆದರೂ ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿತ್ತು.
ಈಗಾಗಲೇ 2019ರಲ್ಲಿ ರಷ್ಯಾಗೆ 800 ಮಿಲಿಯನ್ ಡಾಲರ್ ಅನ್ನು ಭಾರತ ಪಾವತಿಸಿದ್ದು, ಅಮೆರಿಕ ಈಗಲೂ ಭಾರತದ ಮೇಲೆ ಕೆಲವು ಕ್ರಮಗಳನ್ನು ಕೈಗೊಳ್ಳಬಹುದೆಂಬ ಆತಂಕ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:CBI, ED ಅಧಿಕಾರಾವಧಿ 5 ವರ್ಷ ವಿಸ್ತರಣೆಗೆ ಕೇಂದ್ರದಿಂದ ಸುಗ್ರೀವಾಜ್ಞೆ