ಮುಜಾಫ್ಪರ್ ನಗರ್ (ಉತ್ತರಪ್ರದೇಶ): ಉತ್ತರ ಪ್ರದೇಶದಲ್ಲಿ ಈಗ ಅಪರಾಧಗಳಿಗೆ ಶುಲ್ಕ ನಿಗದಿಯಾಗಿದೆ. ದುಷ್ಕರ್ಮಿಗಳ ಗ್ಯಾಂಗ್ ವಿವಿಧ ಅಪರಾಧಗಳಿಗೆ 'ಶುಲ್ಕ' ನಿಗದಿಪಡಿಸಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗುತ್ತಿದೆ.
ಪಿಸ್ತೂಲ್ ಹಿಡಿದ ವ್ಯಕ್ತಿಯೊಬ್ಬನ ಭಾವಚಿತ್ರ ಸಹಿತ ಒಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗುತ್ತಿದ್ದು, ಈ ಪೋಸ್ಟ್ನಲ್ಲಿ ವಿವಿಧ 'ಸೇವೆ'ಗಳಿಗೆ ಶುಲ್ಕವನ್ನು ನಿಗದಿ ಮಾಡಲಾಗಿದೆ.
ಸೇವೆಗಳಿಗೆ ಶುಲ್ಕಗಳು ಹೀಗಿವೆ..!
- ಬೆದರಿಕೆ ಹಾಕಲು- 1 ಸಾವಿರ ರೂಪಾಯಿ
- ವ್ಯಕ್ತಿಯನ್ನು ಥಳಿಸಲು- 5 ಸಾವಿರ ರೂಪಾಯಿ
- ವ್ಯಕ್ತಿಯನ್ನು ಗಾಯಗೊಳಿಸಲು- 10 ಸಾವಿರ ರೂಪಾಯಿ
- ಕೊಲೆ ಮಾಡಲು- 55 ಸಾವಿರ ರೂಪಾಯಿ
ಈ ರೀತಿಯಾಗಿ ಶುಲ್ಕಗಳನ್ನು ನಿಗದಿ ಮಾಡಿರುವ ಗ್ಯಾಂಗ್, ಭೂ ವಿವಾದಗಳನ್ನು ಬಗೆಹರಿಸುವುದಾಗಿ ಹೇಳಿಕೊಂಡಿದೆ. ಇದರ ಜೊತೆಗೆ ''ತೃಪ್ತಿದಾಯಕ ಸೇವೆ''ಯನ್ನು ಒದಗಿಸುವುದಾಗಿ ಭರವಸೆ ನೀಡಿದೆ.
ಪೋಸ್ಟ್ ಜೊತೆಗೆ ಸಂಪರ್ಕಿಸಲು ಮೊಬೈಲ್ ನಂಬರ್ ಕೂಡಾ ನೀಡಲಾಗಿದೆ. ಪೋಸ್ಟ್ ವೈರಲ್ಲಾಗುತ್ತಿದ್ದಂತೆ ತನಿಖೆ ಕೈಗೊಂಡ ಪೊಲೀಸರು ಪೋಸ್ಟ್ ಹಂಚಿಕೊಂಡವನನ್ನು ಚರತಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೌಕಾದಾ ಗ್ರಾಮದವನೆಂದು ಗುರ್ತಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.