ಹೈದರಾಬಾದ್: ಹೊಸ ವರ್ಷಾಚರಣೆ ವೇಳೆ ಮದ್ಯಪ್ರಿಯರು ಮೋಜು, ಮಸ್ತಿ ಮಾಡಿದ್ದಾರೆ. ವರ್ಷದ ಕೊನೆಯ ದಿನದಂದು ತೆಲಂಗಾಣದಲ್ಲಿ ಬರೋಬ್ಬರಿ 215.74 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. 2,17,399 ಮದ್ಯ ಹಾಗೂ 1,28,446 ಬಿಯರ್ಅನ್ನು ಮದ್ಯದಂಗಡಿಗಳಿಗೆ ಒದಗಿಸಲಾಗಿತ್ತು. ಕೊರೊನಾ ವೈರಸ್ ಹರಡಿದ ಬಳಿಕ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.
ಕಳೆದ ವರ್ಷ ಕೊನೆಯ ದಿನ ರೂ.171.93 ಕೋಟಿ ಮೌಲ್ಯದ ಮದ್ಯ ಖರೀದಿಯಾಗಿತ್ತು. ಈ ಬಾರಿ ಸುಮಾರು ರೂ.43 ಕೋಟಿ ಹೆಚ್ಚು ಮಾರಾಟವಾಗಿದೆ. ಈ ವರ್ಷದ ಅಂತ್ಯದಲ್ಲಿ ಮಾರಾಟವು ಭಾರಿ ಹೆಚ್ಚಳವಾದಂತಾಗಿದೆ. ಕಳೆದ ಏಳು ದಿನಗಳಲ್ಲಿ ಬರೋಬ್ಬರಿ 1,111.29 ಕೋಟಿ ರೂ.ಗಳ ಮಾರಾಟ ನಡೆದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ರೂ.925.92 ಕೋಟಿ ಮಾರಾಟವಾಗಿತ್ತು ಎಂಬುದು ಗಮನಾರ್ಹ. ಅಂದರೆ ಸುಮಾರು 185 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಮದ್ಯದಂಗಡಿಗಳಲ್ಲಿ ಮಾರಾಟಕ್ಕೆ ಎರಡು ಗಂಟೆ ಹೆಚ್ಚುವರಿ ಸಮಯ ನೀಡಲಾಗಿತ್ತು. ಇದು ಮಾರಾಟದ ಏರಿಕೆಗೆ ಕಾರಣವಾದ ಪ್ರಮುಖ ಅಂಶವಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಗ್ರೇಟರ್ ಹೈದರಾಬಾದ್‌ನ ಮೂರು ಕಮಿಷನರೇಟ್‌ಗಳಲ್ಲಿ ನಡೆಸಿದ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಅನೇಕ ಮದ್ಯಪ್ರಿಯರು ಸಿಕ್ಕಿಬಿದ್ದಿದ್ದಾರೆ. ಅದರಲ್ಲಿ ಶೇ. 10ರಷ್ಟು ಮಂದಿಯಲ್ಲಿ ಬ್ಲಡ್ ಆಲ್ಕೋಹಾಲ್ ಅಂಶವು (ಬಿಎಸಿ) 500 ಮಿ.ಗ್ರಾಂ.ಗಿಂತ ಅಧಿಕವಾಗಿತ್ತು ಎಂಬುದು ಗಮನಾರ್ಹ.
ಒಟ್ಟಾರೆ, 2021ಕ್ಕೆ ಹೋಲಿಸಿದರೆ, ಮದ್ಯ ಮಾರಾಟವು ಈ ವರ್ಷ 4 ಬಿಲಿಯನ್ನಷ್ಟು ಅಧಿಕವಾಗಿದೆ. 2021ರಲ್ಲಿ 30222.27 ಕೋಟಿ ರೂ. ಗಳಿಕೆ ಆಗಿತ್ತು. ತೆಲಂಗಾಣ ಅಬಕಾರಿ ಇಲಾಖೆ ಅಂಕಿ-ಅಂಶಗಳ ಪ್ರಕಾರ 2022ರಲ್ಲಿ 34352.75 ಕೋಟಿ ರೂ.ಗಳಷ್ಟು ಮದ್ಯ ಮಾರಾಟವಾಗಿದೆ.
ಇದನ್ನು ಓದಿ:ಹೊಸ ವರ್ಷದಂದೇ ಎರಡು ಕಾರ್ಖಾನೆಗಳಲ್ಲಿ ಅಗ್ನಿ ದುರಂತ: ಮಹಿಳೆಯರು ಸೇರಿ ಐವರ ದುರ್ಮರಣ