ನವದೆಹಲಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ ನಂತರ ಬಾಲಕಿಯ ಹೆತ್ತವರ ಒಪ್ಪಿಗೆಯಿಲ್ಲದೇ ಅಂತ್ಯಸಂಸ್ಕಾರ ನೆರವೇರಿಸಿದ ಪ್ರಕರಣದಲ್ಲಿ ಮೃತ ಬಾಲಕಿಯ ಕುಟುಂಬಸ್ಥರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೇಟಿ ಮಾಡಿದರು.
"ನಾನು ಅವಳ ಹೆತ್ತವರನ್ನು ಭೇಟಿಯಾದೆ. ಅವರ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಆದರೆ, ದೆಹಲಿ ಸರ್ಕಾರವು ಅವರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುತ್ತದೆ. ನಾವು ನ್ಯಾಯಾಧೀಶರ ವಿಚಾರಣೆಗೆ ಆದೇಶಿಸುತ್ತೇವೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಉನ್ನತ ವಕೀಲರನ್ನು ನೇಮಿಸುತ್ತೇವೆ. ಅಪರಾಧಿಗಳನ್ನು ಬಿಡಲಾಗುವುದಿಲ್ಲ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ನಿವಾಸಿ ಒಂಬತ್ತು ವರ್ಷದ ಬಾಲಕಿ ಕಳೆದ ಭಾನುವಾರ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಅಪ್ರಾಪ್ತೆಯ ಹೆತ್ತವರ ಒಪ್ಪಿಗೆಯಿಲ್ಲದೇ ಹಳೆ ನಂಗಲ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 376 ಮತ್ತು 506ರ ಅಡಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ.
"ನಾವು ಮುಖ್ಯ ಆರೋಪಿಯ ಮನೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಮತ್ತು ಆರೋಪಿಗಳ ದೇಹದಿಂದ ಎಲ್ಲ ಜೈವಿಕ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಎಫ್‌ಎಸ್‌ಎಲ್ ತಂಡವು ವಾಟರ್ ಕೂಲರ್ ಅನ್ನು ಸಹ ಪರೀಕ್ಷಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ತನಿಖೆ ಮುಂದುವರೆದಂತೆ, ನಾವು ಆರೋಪಿಗಳನ್ನು ಬಂಧಿಸುತ್ತೇವೆ" ಎಂದು ನೈಋತ್ಯ ಡಿಸಿಪಿ ಇಂಗಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ.