ವಾರ್ಧಾ(ಮಹಾರಾಷ್ಟ್ರ): ಫಾರ್ಮ್ ಹೌಸ್‌ವೊಂದರ ಮೇಲೆ 7ರಿಂದ 8 ಜನ ದರೋಡೆಕೋರರ ತಂಡ ದಾಳಿ ಮಾಡಿದ್ದು, 55 ಗೋಣಿಚೀಲ ಸೋಯಾಬಿನ್ ಹಾಗೂ ಚಿನ್ನಾಭರಣ ದೋಚಿರುವ ಘಟನೆ ವಾರ್ಧಾದ ಕಾರಂಜಾ ತಾಲೂಕಿನ ವಾಘೋಡಾದಲ್ಲಿ ನಡೆದಿದೆ. ಫಾರ್ಮ್ ಹೌಸ್ನಲ್ಲಿದ್ದ ವ್ಯಕ್ತಿಯ ಹೊಟ್ಟೆಗೆ ದರೋಡೆಕೋರರು ಹರಿತವಾದ ಆಯುಧದಿಂದ ಇರಿದಿದ್ದಾರೆ. ಗಾಯಾಳುವನ್ನು ತುರ್ತು ಚಿಕಿತ್ಸೆಗಾಗಿ ನಾಗ್ಪುರ ಆಸ್ಪತ್ರೆಗೆ ರವಾನಿಸಲಾಗಿದೆ.
ನಾಗ್ಪುರದ ನಾರಾಯಣ್ ಪಲಿವಾಲ್ ಎಂಬವರಿಗೆ ಸೇರಿದ ಫಾರ್ಮ್ ಹೌಸ್ ಇದಾಗಿದೆ. ತಮ್ಮ ತೋಟದ ಬೆಳೆಗಳು ಹಾಗೂ ಆದಾಯವನ್ನು ಅವರು ಈ ತೋಟದ ಮನೆಯಲ್ಲಿ ಇಡುತ್ತಾರೆ. ವಾರಕ್ಕೊಮ್ಮೆ ನಾರಾಯಣ್ ಫಾರ್ಮ್ ಹೌಸ್ಗೆ ಬಂದು ಹೋಗುತ್ತಿದ್ದಾರೆ. ಹಾಗೆಯೇ ಭಾನುವಾರ ರಾತ್ರಿ ಮಗ ಗೋಪಾಲ್ ಪಲಿವಾಲ್ ಹಾಗೂ ಪತ್ನಿ ಹರಿಕುಮಾರಿ ಪಲಿವಾಲ್ ಅವರೊಂದಿಗೆ ತೋಟದ ಮನೆಯಲ್ಲಿದ್ದರು. ಅದೇ ವೇಳೆ ಮಧ್ಯ ರಾತ್ರಿ ಇಬ್ಬರು ವ್ಯಕ್ತಿಗಳು ಬಾಗಿಲು ತಟ್ಟಿದ್ದಾರೆ. ಮಗ ಬಾಗಿಲು ತೆರೆದಿದ್ದಾನೆ. ತಕ್ಷಣವೇ ಇಬ್ಬರು ವ್ಯಕ್ತಿಗಳು ಆತನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ಅವರ ನಡುವೆ ಜಗಳವಾಗುತ್ತಿರುವಾಗಲೇ ಮತ್ತೆ ಐದಾರು ಜನ ಹಠಾತ್ತನೆ ಮನೆಯೊಳಗೆ ನುಗ್ಗಿದ್ದಾರೆ.
ಜಗಳದಲ್ಲಿ ದರೋಡೆಕೋರರು ಗೋಪಾಲ್ ಪಲಿವಾಲ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಹರಿಕುಮಾರಿ ಪಲಿವಾಲ್ ಅವರ ಕೊರಳಲ್ಲಿದ್ದ ಮಂಗಳಸೂತ್ರ ಹಾಗೂ ಕಿವಿಯ ಆಭರಣಗಳನ್ನಲ್ಲದೆ ಅಲ್ಲಿದ್ದ 55 ಮೂಟೆ ಸೋಯಾಬಿನ್ ಅನ್ನು ದರೋಡೆಕೋರರು ಹೊತ್ತೊಯ್ದಿದ್ದಾರೆ.
ಪಲಿವಾಲ್ ಕುಟುಂಬಸಮೇತ ಕಾರಿನಲ್ಲಿ ತೋಟದ ಮನೆಗೆ ಬಂದಿದ್ದರು. ದರೋಡೆ ಮಾಡಿದ ಆರೋಪಿಗಳು, ಮನೆಯವರು ಪೊಲೀಸರಿಗೆ ಮಾಹಿತಿ ನೀಡದಂತೆ ಹೊರಗಡೆ ನಿಂತಿದ್ದ ಕಾರಿನ ಚಕ್ರಗಳ ಗಾಳಿ ತೆಗೆದಿದ್ದು ಮಾತ್ರವಲ್ಲದೆ ಮನೆಯವರ ಮೊಬೈಲ್ ಫೋನ್ಗಳನ್ನೂ ಕಿತ್ತುಕೊಂಡು ಹೋಗಿದ್ದಾರೆ. ಆದರೆ ಪಲಿವಾಲ್ ಕುಟುಂಬದವರು ಗಾಳಿ ತೆಗೆದ ವಾಹನದಲ್ಲೇ ಪೊಲೀಸ್ ಠಾಣೆಗೆ ತೆರಳಿ, ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಕಾರಂಜಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 395, 397ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪೊಲೀಸ್ ಸೋಗಿನಲ್ಲಿ ಉದ್ಯಮಿ ಮನೆ ದರೋಡೆ: ಮಾಜಿ ಚಾಲಕ ಸೇರಿ 10ಕ್ಕೂ ಹೆಚ್ಚು ಆರೋಪಿಗಳು ಸೆರೆ