ಚೆನ್ನೈ(ತಮಿಳುನಾಡು): ಚೆನ್ನೈನ ಅರುಂಬಕ್ಕಂ ಪ್ರದೇಶದಲ್ಲಿರುವ ಫೆಡ್ಬ್ಯಾಂಕ್ನಲ್ಲಿ(Fed Bank) ಹಾಡಹಗಲೇ ದೊಡ್ಡಮಟ್ಟದ ದರೋಡೆ ನಡೆದಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದೊಂದಿಗೆ ಮುಸುಕುಧಾರಿಗಳು ಪರಾರಿಯಾಗಿದ್ದು, ಸಿನಿಮೀಯ ರೀತಿಯಲ್ಲಿ ಈ ಕಳ್ಳತನ ನಡೆದಿದೆ. ಸಿಬ್ಬಂದಿಯನ್ನು ಶೌಚಾಲಯದಲ್ಲಿ ಕೂಡಿಹಾಕಿರುವ ಮುಸುಕುಧಾರಿಗಳು, ಗ್ರಾಹಕರನ್ನು ಖುರ್ಚಿಗಳಿಗೆ ಕಟ್ಟಿಹಾಕಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ದೋಚಿ ಪರಾರಿಯಾಗಿದ್ದಾರೆ.
ಚೆನ್ನೈನ ಅರುಂಬಕ್ಕಂ ಪ್ರದೇಶದ ಫೆಡ್‌ಬ್ಯಾಂಕ್ ಗೋಲ್ಡ್ ಲೋನ್ ಶಾಖೆಯೊಳಗೆ ನುಗ್ಗಿರುವ ಮೂವರು ಮುಸುಕುಧಾರಿಗಳು, ಉದ್ಯೋಗಿಗಳನ್ನ ಬೆದರಿಸಿ ಶೌಚಾಲಯದೊಳಗೆ ಕೂಡಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಸ್ಟ್ರಾಂಗ್ ರೂಂನ ಕೀ ತೆಗೆದುಕೊಂಡು 32 ಕೆಜಿ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಆಯುಕ್ತ ಶಂಕರ್ ಜೀವಾಲ್ ಮಾತನಾಡಿದ್ದು, ಪ್ರಕರಣದ ತನಿಖೆ ನಡೆಸಲು ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ. ಇದರಲ್ಲಿ ಬ್ಯಾಂಕ್ನಲ್ಲಿ ಕೆಲಸ ಮಾಡ್ತಿದ್ದ ಉದ್ಯೋಗಿಗಳ ಕೈವಾಡವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇಗುಲದ ಗರ್ಭಗುಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ 'ಜೋಡಿ ಹಕ್ಕಿಗಳು': ವಿಡಿಯೋ
ಘಟನೆ ಬೆನ್ನಲ್ಲೇ ಎಲ್ಲ ಉದ್ಯೋಗಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಫೆಡ್‌ಬ್ಯಾಂಕ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ದೇಶಾದ್ಯಂತ 463 ಶಾಲೆ ಹೊಂದಿದ್ದು, ಚಿನ್ನದ ಮೇಲೆ ಸಾಲ, ಗೃಹ ಸಾಲ, ಆಸ್ತಿ ಮೇಲೆ ಸಾಲ ಜೊತೆಗೆ ವ್ಯಾಪಾರಕ್ಕೂ ಸಾಲ ನೀಡುತ್ತದೆ.