ನವದೆಹಲಿ: ಇಂಧನ ಬೆಲೆಗಳು ಏರಿಕೆಯೊಂದಿಗೆ ಸಾರಿಗೆ ವೆಚ್ಚವೂ ಹೆಚ್ಚುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹಣ್ಣುಗಳ ಬೆಲೆಗಳ ಧಾರಣೆಯೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಹಾಗು ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇಂಧನ ದರ ಗಗನಕ್ಕೇರುತ್ತಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 107.59 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 96.32 ರೂ ಇದೆ.
ದೆಹಲಿಯ ಗಾಜಿಪುರ ಮಂಡಿಯಲ್ಲಿ ತರಕಾರಿ ಮಾರಾಟಗಾರರೊಬ್ಬರು ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ 40-48 ರೂ.ಗಳಷ್ಟಿದೆ, ಟೊಮೆಟೊ ಬೆಲೆ ಕೆ.ಜಿಗೆ 40-50 ರೂ. ಇದೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಸಾರಿಗೆ ವೆಚ್ಚವನ್ನು ಹೆಚ್ಚಿಸಿವೆ. ಹಾಗೆಯೇ ಮಳೆಯೂ ಹೆಚ್ಚಾಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿದ್ದು ತರಕಾರಿ ಮತ್ತು ಹಣ್ಣುಗಳ ಬೆಲೆಗಳು ಜಾಸ್ತಿಯಾಗಿವೆ ಎಂದು ಹೇಳಿದರು.
ಇನ್ನು ದೇಶಾದ್ಯಂತ ಸತತ ಐದನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಸಾರಿಗೆ ವೆಚ್ಚ ಮತ್ತು ಟೋಲ್ ಶುಲ್ಕಗಳ ಹೆಚ್ಚಳದಿಂದಾಗಿಯೂ ತರಕಾರಿ ದರಗಳು ಹೆಚ್ಚುತ್ತಿವೆ ಅನ್ನೋದು ತರಕಾರಿ ಮಾರಾಟಗಾರರ ಅಭಿಪ್ರಾಯ.
ಪೂರೈಕೆ ಮತ್ತು ಬೇಡಿಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರವು ಹಲವು ತೈಲ ರಫ್ತು ಮಾಡುವ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಆದರೆ ತಕ್ಷಣವೇ ಬೆಲೆ ಇಳಿಕೆಯಾಗುವ ಯಾವುದೇ ಸೂಚನೆ ಇಲ್ಲ.