ಬಕ್ಸಾರ್ (ಬಿಹಾರ): ಉತ್ತರ ಪ್ರದೇಶದ ಬಾರಾ ನಗರ ಪಂಚಾಯತಿ ವ್ಯಾಪ್ತಿಯ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಗಂಗಾ ನದಿಯಲ್ಲಿ ಮೃತದೇಹಗಳನ್ನು ತೇಲಿ ಬಿಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ.
'ಶವಗಳನ್ನು ನದಿಯಲ್ಲಿ ಬಿಡಲು ನನಗೆ ತಿಳಿಸಿದ್ದಾರೆ'
ನದಿಯಲ್ಲಿ ಶವಗಳನ್ನು ವಿಲೇವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಈಟಿವಿ ಭಾರತ ಪ್ರತಿನಿಧಿ ಪ್ರಶ್ನಿಸಿದಾಗ, ಆತ "ನನ್ನ ಹೆಸರು ಬಿಹಾರಿ ಸಾ ಮತ್ತು ತಂದೆಯ ಹೆಸರು ಡೆಹಾರಿ. ನಾನು ಶವಗಳನ್ನು ನದಿಗೆ ಹಾಕುತ್ತಿದ್ದೇನೆ. ಇಲ್ಲಿಯವರೆಗೆ ನಾನು ಆರು ಶವಗಳನ್ನು ನದಿಯಲ್ಲಿ ಬಿಟ್ಟಿದ್ದೇನೆ. ಇನ್ನೂ ಹಲವಾರು ಶವಗಳನ್ನು ಬಿಡಲು ನನಗೆ ಆದೇಶಿಸಲಾಗಿದೆ" ಎಂದಿದ್ದಾನೆ.
'ಪೊಲೀಸರೇ ಹೇಳಿದ್ರು'
ಶವಗಳನ್ನು ಇಲ್ಲಿ ಬಿಡುವಂತೆ ನಿನಗೆ ನಿರ್ದೇಶಿಸಿದವರು ಯಾರು? ಎಂದು ಕೇಳಿದಾಗ, ಬಾರಾ ಪೊಲೀಸ್ ಅಧಿಕಾರಿಗಳ ಹೆಸರನ್ನು ಹೇಳಿದ್ದಾನೆ. ಮಾಧ್ಯಮದವರು ಸ್ಥಳದಿಂದ ತೆರಳಿದ ಬಳಿಕ ಇನ್ನೂ ಕೆಲವು ಶವಗಳನ್ನು ನದಿಗೆ ಹಾಕುವುದಾಗಿ ಆತ ತಿಳಿಸಿದ್ದಾರೆ.
ಬಿಹಾರದ ಬಕ್ಸಾರ್‌ನಲ್ಲಿ ಹರಿಯುವ ಗಂಗಾ ನದಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮೃತದೇಹಗಳು ಸೋಮವಾರ ತೇಲಿ ಬಂದಿದ್ದವು. ಈ ಮೃತದೇಹಗಳನ್ನು ನಾಯಿಗಳು ತಿನ್ನುತ್ತಿರುವ ದೃಶ್ಯ ದೇಶದಲ್ಲಿ ಸಂಚಲನ ಮೂಡಿಸಿತ್ತು. ಈ ಘಟನೆ ಬೆಳಕಿಗೆ ಬಂದ ಬಳಿಕ ಉತ್ತರ ಪ್ರದೇಶದ ಬಲ್ಲಿಯಾ ಮತ್ತು ಗಾಜಿಪುರ ಜಿಲ್ಲೆಗಳಲ್ಲಿ ಹರಿಯುವ ಗಂಗಾ ನದಿಯಲ್ಲಿ ಮಂಗಳವಾರ ಮತ್ತೆ ಶವಗಳು ತೇಲುತ್ತಿರುವುದು ಕಂಡುಬಂದಿದೆ.
ಬಿಹಾರದ ಸಚಿವ ಸಂಜಯ್ ಕುಮಾರ್ ಝಾ ಮಾತನಾಡಿ, ಬಕ್ಸಾರ್ ಜಿಲ್ಲೆಯ ಗಂಗೆಯಿಂದ ಕನಿಷ್ಠ 71 ಶವಗಳನ್ನು ಹೊರತೆಗೆಯಲಾಗಿದ್ದು, ಅಂತಿಮ ವಿಧಿಗಳನ್ನು ಸಹ ನೆರವೇರಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈಟಿವಿ ಭಾರತ ಎಕ್ಸ್ಕ್ಲೂಸಿವ್.. ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು!