ತಮಿಳುನಾಡು : ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ತಮ್ಮನ್ನು ಅಗಲಿದ ಪತ್ನಿ ಮತ್ತು ತಾಯಿಯ ಪ್ರತಿಮೆ ಸ್ಥಾಪಿಸಿ ತಮ್ಮ ಹೆತ್ತಮ್ಮ ಹಾಗೂ ಮಡದಿ ಮೇಲಿನ ಅಗಾಧ ಪ್ರೇಮ ಪ್ರಚುರಪಡಿಸಿದ್ದಾರೆ.
ಮೈಲಾಡುತುರೆ ನಿವಾಸಿ 72 ವರ್ಷದ ಮದನ್ ಮೋಹನ್ ಕಳೆದ ವರ್ಷ ತಮ್ಮ ಹೆಂಡತಿಯ ಮೊದಲನೇ ವರ್ಷದ ಪುಣ್ಯಸ್ಮರಣೆ ಸಮಯದಲ್ಲಿ ತಮ್ಮ ನಿವಾಸದೆದುರೇ ಆಕೆಯ ಹಾಗೂ ತಾಯಿಯ ಪ್ರತಿಮೆ ಮಾಡಿಸಿ, ಅದಕ್ಕೊಂದು ದೇವಾಲಯ ನಿರ್ಮಿಸಿ, ಆ ಇಬ್ಬರು ಪ್ರೀತಿಪಾತ್ರರ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.
ಮದನ್ ಮೋಹನ್ ಪತ್ನಿ ಮೀನಾಕ್ಷಿಯಮ್ಮಾಳ್ (61) ಅನಾರೋಗ್ಯದಿಂದ 2019ರ ಸೆಪ್ಟೆಂಬರ್ 27ರಂದು ನಿಧನರಾದರು. 40 ವರ್ಷಗಳಿಂದ ಕಷ್ಟ-ಸುಖಗಳಲ್ಲಿ ಜೊತೆಯಾಗಿ ದಾಂಪತ್ಯದ ಸವಿ ಉಣಬಡಿಸಿದ ಸಂಗಾತಿಯ ನೆನಪು ಮದನ್ ರನ್ನು ಹೆಚ್ಚು ಕಾಡಿತು.
ಮಡಿದ ಮಡದಿಗಾಗಿ ಹಾಗೂ ಹೆತ್ತ ತಾಯಿಯ ನೆನಪಿಗಾಗಿ ನಿರ್ಮಿಸಿದ ದೇವಾಲಯದಲ್ಲಿ ಇಬ್ಬರ ಪ್ರತಿಮೆಗಳಿಗೂ ಕ್ಷೀರಾಭಿಷೇಕ ಮಾಡುವ ಮೂಲಕ ತಮ್ಮ ಪ್ರೀತಿ ಪರಾಕಾಷ್ಠೆ ಮೆರೆದಿದ್ದಾರೆ ಮದನ್ ಮೋಹನ್.
ಕಳೆದ ವರ್ಷ ಕರ್ನಾಟಕದ ಉದ್ಯಮಿಯೊಬ್ಬರು ಅಗಲಿದ ಪತ್ನಿಯ ಮೇಣದ ಮೂರ್ತಿ ಮಾಡಿಸಿ ಮನೆಯ ಗೃಹಪ್ರವೇಶ ನೆರವೇರಿಸಿ ಸಾಕಷ್ಟು ಸುದ್ದಿಯಲ್ಲಿದ್ದರು.