ಚಂಡೀಗಢ: ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಹುಟ್ಟು-ಸಾವು ಇದೆ. ನಾವು ಈ ಎರಡಕ್ಕೂ ಮಹತ್ವ ನೀಡುತ್ತಿದ್ದೇವೆ. ತಾಯಿ ಗರ್ಭದಿಂದ ಭೂಮಿಗೆ ಬರುವ ಮಗುವನ್ನು ಸ್ವಾಗತಿಸುವಂತೆಯೇ, ದೇಹ ತ್ಯಜಿಸಿದ ಆತ್ಮದ ಮುಕ್ತಿಗೂ ಪವಿತ್ರ ವಿಧಿವಿಧಾನಗಳಿವೆ. ದೇಹದ ದಹನಾದಿ ಕ್ರಿಯೆ ಅಥವಾ ಅಂತ್ಯಕ್ರಿಯೆ ಮಾಡದಿದ್ದರೆ ಇಹಲೋಕ ತ್ಯಜಿಸಿದವರ ಆತ್ಮಕ್ಕೆ ಶಾಂತಿ ಸಿಗದು ಎಂಬುದು ನಂಬಿಕೆ. ಆದರೆ ಅದೆಷ್ಟೋ ಜನರು ಪ್ರತಿನಿತ್ಯ ನೂರಾರು ಕಾರಣಗಳಿಂದ ಬೀದಿಯಲ್ಲೇ ಹೆಣವಾಗುತ್ತಾರೆ. ಅವರಲ್ಲಿ ಅನೇಕರಿಗೆ ಧಾರ್ಮಿಕ ವಿಧಿವಿಧಾನಗಳಿಲ್ಲದೆಯೇ ಕಳುಹಿಸಲಾಗುತ್ತದೆ. ಹಾಗಾದ್ರೆ, ಇಂಥ ಅನಾಥ ಶವಗಳಿಗೆ ಮುಕ್ತಿಯ ದಾರಿ ತೋರುವವರಾರು?
ಹೌದು. ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಜೀವಂತವಾಗಿವೆ ಎಂಬುದಕ್ಕೆ ಚಂಡೀಗಢದ ಈ ವ್ಯಕ್ತಿಯೇ ಉದಾಹರಣೆ. ಕಳೆದ 25 ವರ್ಷಗಳಿಂದಲೂ ಇವರು ಸಾವಿರಾರು ಆತ್ಮಗಳಿಗೆ ಮುಕ್ತಿ ನೀಡಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಶ್ಯಾಮ್ಲಾಲ್ ಅವರು ಕಳೆದ 25 ವರ್ಷಗಳಿಂದ ಸಾವಿರಾರು ಮೃತದೇಹಗಳ ಅಂತಿಮ ವಿಧಿಗಳನ್ನು ನಿರ್ವಹಿಸುತ್ತಾ ಬಂದವರು. ಚಂಡೀಗಢ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 30,000 ಕ್ಕಿಂತಲೂ ಹೆಚ್ಚು ಮೃತದೇಹಗಳ ಅಂತಿಮ ವಿಧಿವಿಧಾನಗಳನ್ನು ಮಾಡಿದ್ದಾರೆ.
ಶ್ಯಾಮ್ಲಾಲ್ ಅವರ ಮಗ ಏಪ್ರಿಲ್ 1995 ರಲ್ಲಿ ಜನಿಸಿದರು. ಅವರ ಪತ್ನಿ ಹೆರಿಗೆಯ ಸಮಯದಲ್ಲಿ ನಿಧನರಾದರಂತೆ. ನಂತರ ಅವರು ತುಂಬಾ ಮಾನಸಿಕ ಖಿನ್ನತೆಗೆ ಒಳಗಾಗಲು ಪ್ರಾರಂಭಿಸಿದರು. ಖಿನ್ನತೆಯಿಂದಾಗಿ, ಕೆಲವೊಮ್ಮೆ ಅವರು ಸ್ಮಶಾನಕ್ಕೆ ಹೋಗಿ ಗಂಟೆಗಳ ಕಾಲ ಕುಳಿತುಕೊಳ್ಳುತ್ತಿದ್ದರಂತೆ. ವಾರಸುದಾರರಿಲ್ಲದ ಅನೇಕ ಶವಗಳು ಅಂತ್ಯಕ್ರಿಯೆಯಿಲ್ಲದೇ ಸ್ಮಶಾನದ ಬಳಿಯೇ ಬಿದ್ದಿರುವುದನ್ನು ಅವರು ಗಮನಿಸಿದರಂತೆ.
ಅಂದಿನಿಂದ, ಶ್ಯಾಮ್ಲಾಲ್ ಯಾರೂ ಹಕ್ಕು ಪಡೆಯದ ದೇಹಗಳ ಅಂತ್ಯಕ್ರಿಯೆ ಮಾಡಲು ಪ್ರಾರಂಭಿಸಿದ್ದಾರೆ. ಚಂಡೀಗಢದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಇವರು ಕಳೆದ ವರ್ಷ ನಿವೃತ್ತರಾದರು. ಚಂಡೀಗಢದ ಹೊರತಾಗಿ ಅವರು ಮಣಿಮಾಜ್ರಾ, ಪಂಚಕುಲ, ಪಾಣಿಪತ್, ಪಟಿಯಾಲ, ಮೊಹಾಲಿ, ಜಿರಾಕ್‌ಪುರ, ಮತ್ತು ಶಿಮ್ಲಾದಲ್ಲಿ ಹಲವಾರು ದೇಹಗಳ ಕೊನೆಯ ವಿಧಿಗಳನ್ನು ನಿರ್ವಹಿಸಿದ್ದಾರೆ.