ನವದೆಹಲಿ : ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಯುತ್ತಿದ್ದು, ದೆಹಲಿ-ಯುಪಿ ಗಡಿಯಲ್ಲಿರುವ ಗಾಜಿಪುರದಲ್ಲಿ ರೈತ ಪ್ರತಿಭಟನೆಗೆ ಸುಮಾರು ಸಾವಿರ ಮಂದಿ ನಿವೃತ್ತ ಸೈನಿಕರು ಸಂಪೂರ್ಣ ಬೆಂಬಲ ನೀಡಿದ್ದಾರೆ.
ಭಾರತೀಯ ಸೇನೆಯಲ್ಲಿ ನಾಯಕ್ ಆಗಿದ್ದ ಮತ್ತು ಈಗ ವೆಟರನ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಅನುರಾಗ್ ಲಾಥ್ವಾಲ್ ಮಾತನಾಡಿ, ರೈತರ ಎಲ್ಲಾ ಬೇಡಿಕೆಗಳು ಸರಿಯಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಹಾಗೂ ರೈಲ್ವೆ ವಲಯಗಳನ್ನು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರ ಮಾಡಿದಂತೆ, ಕೃಷಿ ಕ್ಷೇತ್ರವನ್ನೂ ಹಸ್ತಾಂತರ ಮಾಡಲು ಯತ್ನಿಸುತ್ತಿದೆ ಎಂದು ಅನುರಾಗ್ ಲಾಥ್ವಾಲ್ ಆರೋಪಿಸಿದ್ದಾರೆ.
ವೆಟರನ್ಸ್ ಅಸೋಸಿಯೇಶನ್‌ನ ರಾಷ್ಟ್ರೀಯ ಅಧ್ಯಕ್ಷರಾದ ಸೈನ್ಯದಲ್ಲಿ ಸುಬೇದಾರ್ ಆಗಿದ್ದ ಜೈ ಪ್ರಕಾಶ್ ಮಿಶ್ರಾ ಮೊದಲಿನಿಂದಲೂ ರೈತರಿಗೆ ಬೆಂಬಲ ನೀಡುತ್ತಿದ್ದು, ಆ ಬೆಂಬಲವನ್ನು ಮುಂದುವರೆಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಪರಕಾಯ ಪ್ರವೇಶ ಮಾಡಿದ 'ಚಾಮುಂಡಿ' : ರಾಕ್ಷಸ ಪಾತ್ರಧಾರಿ ಮೇಲೆ ಹಲ್ಲೆಗೆ ಯತ್ನ
ಇನ್ನೋರ್ವ ಮಾಜಿ ಸೇನಾ ಸುಬೇದಾರ್ ಗುರುಚರಣ್ ಸಿಂಗ್ ಮೋದಿ ಸರ್ಕಾರ ಏನು ಹೇಳುತ್ತದೆ ಮತ್ತು ಏನು ಮಾಡುತ್ತದೆ ಎಂಬುದರಲ್ಲಿ ದೊಡ್ಡ ವ್ಯತ್ಯಾಸವಿದೆ. ಆದ್ದರಿಂದ ಮೋದಿ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಇದರ ಜೊತೆಗೆ ಕೇಂದ್ರ ಸರ್ಕಾರದ ಮೂರೂ ಕೃಷಿ ಕಾನೂನುಗಳು ರೈತರಿಗೆ ಡೆತ್ ವಾರಂಟ್‌ನಂತಿದ್ದು, ಈ ಸರ್ಕಾರವನ್ನು ದೇಶ ಆಳಲು ಅನುಮತಿ ನೀಡಬಾರದು ಎಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೆಟರನ್ಸ್ ಅಸೋಸಿಯೇಶನ್‌ನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಮಣಿ ದೇವ್ ಚತುರ್ವೇದಿ ಜನರ ಇಚ್ಛೆಯಂತೆ ಯಾವ ಸರ್ಕಾರ ಹೋದರೂ ಸೋಲು ಗ್ಯಾರಂಟಿ. ರಾವಣ, ಕಂಸ, ದುರ್ಯೋಧನರಂತೆ ಕೆಟ್ಟದ್ದು ಯಾವಾಗಲೂ ಸೋಲುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.