ನವದೆಹಲಿ: ಕೋವಿಡ್-19 ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯುತ್ತಿರುವ ಭಾರತ ಸರ್ಕಾರ, 'ಇಂಡಿಯನ್ ವೇರಿಯಂಟ್' (ಭಾರತೀಯ ರೂಪಾಂತರ) ಎಂಬ ಪದವನ್ನು ಬಳಸಿ, ಉಲ್ಲೇಖಿಸುವ ಎಲ್ಲಾ ವಿಷಯಗಳು, ಪೋಸ್ಟ್ಗಳನ್ನು ತಮ್ಮ ಫ್ಲಾರ್ಟ್ಫಾರ್ಮ್ನಿಂದ ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣಗಳ ಕಂಪನಿಗಳಿಗೆ ಐಟಿ ಸಚಿವಾಲಯ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ತನ್ನ ಯಾವುದೇ ವರದಿಯಲ್ಲಿ ಕೊರೊನಾ ವೈರಸ್‌ನ ಬಿ.1.617 ರೂಪಾಂತರದೊಂದಿಗೆ 'ಇಂಡಿಯನ್ ವೇರಿಯಂಟ್' ಎಂಬ ಪದವನ್ನು ಸಂಯೋಜಿಸಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲ್ಲಾ ಸೋಷಿಯಲ್ ಮೀಡಿಯಾ ಫ್ಲಾರ್ಟ್ಫಾರ್ಮ್ಗಳಿಗೆ ಪತ್ರ ಬರೆದಿದೆ.
ಇದನ್ನೂ ಓದಿ: ಭಾರತದ ರೂಪಾಂತರಿ ವೈರಸ್ 44 ದೇಶಗಳಲ್ಲಿ ಪತ್ತೆ: WHO
ಪ್ರಪಂಚದಾದ್ಯಂತ ಭಾರತೀಯ ರೂಪಾಂತರಿ ಕೊರೊನಾ ಹರಡುತ್ತಿದೆ ಎಂದು ಆನ್‌ಲೈನ್‌ನಲ್ಲಿ ಸುಳ್ಳು ಮಾಹಿತಿಗಳು ಪಸರಿಸಲಾಗುತ್ತಿದೆ. ಹೀಗಾಗಿ ಭಾರತೀಯ ರೂಪಾಂತರವನ್ನು ಸೂಚಿಸುವ ಎಲ್ಲಾ ವಿಷಯಗಳನ್ನು ಡಿಲೀಟ್ ಮಾಡಲು ಐಟಿ ಸಚಿವಾಲಯ ತಿಳಿಸಿದೆ.
ಕೆಲ ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು, ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೋವಿಡ್-19 ಬಿ.1.617 ರೂಪಾಂತರಿಯು, ವಿಶ್ವದಾದ್ಯಂತ ಸುಮಾರು 4,500 ಜನರಲ್ಲಿ ಕಂಡು ಬಂದಿದೆ ಎಂದು ಹೇಳಿತ್ತು. ಆದರೆ ಈ ವಿಷಯವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಳ್ಳಿ ಹಾಕಿತ್ತು.