ನವದೆಹಲಿ: ಭಾರತದಲ್ಲಿ ರೆಮ್ಡೆಸಿವಿರ್ ಉತ್ಪಾದನೆಯು ತಿಂಗಳಿಗೆ ಸುಮಾರು ಮೂರು ಪಟ್ಟು ಅಂದರೆ 1.05 ಕೋಟಿ ಬಾಟಲ್ಗಳಿಗೆ ಏರಿಕೆಯಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಹೇಳಿದ್ದಾರೆ.
ದೇಶದಲ್ಲಿ ಆಂಟಿವೈರಲ್ ಔಷಧದ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರ ಶ್ರಮಿಸುತ್ತಿರುವುದರಿಂದ ರೆಮ್ಡೆಸಿವಿರ್ ಉತ್ಪಾದನಾ ಸಾಮರ್ಥ್ಯವು ಮೇ 4 ರ ವೇಳೆಗೆ 1.05 ಕೋಟಿ ಬಾಟಲ್ಗಳನ್ನು ದಾಟಿದೆ. ಸುಮಾರು ಮೂರು ಪಟ್ಟು ಉತ್ಪಾದನೆ ಹೆಚ್ಚಾಗಿದೆ ಎಂದು ಮಾಂಡವಿಯಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಕೇವಲ 20 ಪ್ಲಾಂಟ್ಗಳಲ್ಲಿ ಉತ್ಪಾದನೆಯಾಗುತ್ತಿದ್ದ ಈ ಆಂಟಿವೈರಲ್ ರೆಮ್ಡೆಸಿವಿರ್ ಔಷಧವನ್ನು ಇದೀಗ ದೇಶದ 57 ಪ್ಲಾಂಟ್ಗಳಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಶೀಘ್ರದಲ್ಲೇ, ಬೇಡಿಕೆಗೆ ತಕ್ಕಂತೆ ರೆಮ್ಡೆಸಿವಿರ್ ಪೂರೈಕೆ ಹೆಚ್ಚಿಸಲು ನಮಗೆ ಸಾಧ್ಯವಾಗಲಿದೆ ಎಂದು ಮಾಂಡವಿಯಾ ತಿಳಿಸಿದ್ರು.
ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಇಂಜಕ್ಷನ್ನ ವೆಚ್ಚವನ್ನು ಕಡಿಮೆ ಮಾಡಲು ಆಂಟಿವೈರಲ್ ಔಷಧಿ ತಯಾರಿಸಲು ಬಳಸುವ ರೆಮ್ಡೆಸಿವಿರ್ ಮತ್ತು ಅದರ ಕಚ್ಚಾ ವಸ್ತುಗಳು ಮತ್ತು ಇತರ ಘಟಕಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸರ್ಕಾರ ಈಗಾಗಲೇ ಮನ್ನಾ ಮಾಡಿದೆ. ಸರ್ಕಾರದ ಹಸ್ತಕ್ಷೇಪದ ನಂತರ ವಿವಿಧ ಕಂಪನಿಗಳು ರೆಮ್ಡೆಸಿವಿರ್ ಚುಚ್ಚುಮದ್ದಿನ ಬೆಲೆಯನ್ನು ಕಡಿತಗೊಳಿಸಿವೆ.