ಹೈದರಾಬಾದ್, ತೆಲಂಗಾಣ: ಹೈದರಾಬಾದ್ನಲ್ಲಿ ಗಣೇಶ ಉತ್ಸವ ಎಷ್ಟು ಜೋರಾಗಿ ನಡೆಯುತ್ತದೋ, ಅಷ್ಟೇ ಪ್ರಾಮುಖ್ಯತೆ ಗಣೇಶನಿಗಾಗಿ ತಯಾರಿಸುವ ಲಡ್ಡಿಗೂ ಇದೆ. ಇಲ್ಲಿನ ಬಾಳಾಪುರ ಲಡ್ಡು ಪ್ರತಿವರ್ಷವೂ ಅತಿಹೆಚ್ಚು ಬೆಲೆಗೆ ಮಾರಾಟವಾಗಿ ದಾಖಲೆ ಸೃಷ್ಟಿಸುತ್ತದೆ. ಆದರೆ, ಈ ಬಾರಿ ಬಾಳಾಪುರ ಲಡ್ಡನ್ನೇ ಮೀರಿಸಿ ಮತ್ತೊಂದು ಕಡೆ ತಯಾರಾದ ಲಡ್ಡು ಕ್ರಯವಾಗುವ ಮೂಲಕ ದಾಖಲೆ ಬರೆದಿದೆ.
ಹೌದು, ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರದ ಬಂಡ್ಲಗುಡ ವ್ಯಾಪ್ತಿಯ ರಿಚ್‌ಮಂಡ್ ವಿಲ್ಲಾ ಕಾಲೋನಿ ಲಡ್ಡು ಹರಾಜಾದ ದರ ತೆಲಂಗಾಣ ರಾಜ್ಯದಲ್ಲಿ ಹೊಸ ದಾಖಲೆ ಬರೆದಿದೆ. ಭಾನುವಾರ ನಡೆದ ಲಡ್ಡು ಹರಾಜಿನಲ್ಲಿ ಈ ಲಡ್ಡು ಬರೋಬ್ಬರಿ 69.80 ಲಕ್ಷಕ್ಕೆ ಕ್ರಯವಾಗಿದೆ. ಡಾ.ಸಾಜಿ ಡಿಸೋಜಿ ಅವರ ತಂಡ ಈ ಲಡ್ಡನ್ನು ಇಷ್ಟು ದುಬಾರಿ ಮೊತ್ತಕ್ಕೆ ಖರೀದಿಸಿದೆ.
ಈ ಬಗ್ಗೆ ಮಾತನಾಡಿದ ಲಡ್ಡು ಖರೀದಿಗಾರ ಡಾ. ಸಾಜಿ, ಗಣೇಶನ ಲಡ್ಡು ಹರಾಜಿನಲ್ಲಿ ನಮಗೆ ದೊರೆತಿರುವುದು ಸಂತಸ ತಂದಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಲಡ್ಡನ್ನು ಖರೀದಿಸಲಾಗಿದೆ. ಹರಾಜಿನಲ್ಲಿ ಬಂದ ಹಣವನ್ನು ಆರ್ವಿ ದಿಯಾ ಚಾರಿಟಬಲ್ ಟ್ರಸ್ಟ್ ಮೂಲಕ ಬಡವರ ಕಲ್ಯಾಣಕ್ಕೆ ವಿನಿಯೋಗಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇದೇ ವೇಳೆ ಪ್ರತಿ ವರ್ಷ ದಾಖಲೆ ಬರೆಯುವ ಬಾಳಾಪುರ ಲಡ್ಡು ಈ ಬಾರಿ 24.60 ಲಕ್ಷಕ್ಕೆ ಹರಾಜಾಗಿದೆ. ಇದನ್ನು ಉತ್ಸವ ಸಮಿತಿ ಸದಸ್ಯ ವಂಗೇಟಿ ಲಕ್ಷ್ಮರೆಡ್ಡಿ ಅವರು ತಮ್ಮದಾಗಿಸಿಕೊಂಡಿದ್ದಾರೆ.
ಓದಿ: ಬೆಂಗಳೂರಲ್ಲಿ ವಿಶ್ವದ ಮೊದಲ ಮಾಂಟೆಸ್ಸರಿ ಸ್ಕೂಲ್ ಆನ್ ವ್ಹೀಲ್ಸ್ ಆರಂಭ: ಇನ್ಮೇಲೆ ಮನೆ ಬಾಗಿಲಿಗೆ ಅಂಗನವಾಡಿ ಶಿಕ್ಷಣ