ನವದೆಹಲಿ: ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ರಾಜ್ಯ ಸರ್ಕಾರದಿಂದ ಪಡೆದುಕೊಳ್ಳಲಾಗಿದೆ ಎಂದು ಕೇಂದ್ರದ ರಾಜ್ಯ ಖಾತೆ ಸಚಿವ ನಿತ್ಯಾನಂದ್ ರೈ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು 2018ರಲ್ಲೇ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕೈಗೊಂಡಿದ್ದು, ರಾಜ್ಯ ವಿಧಾನಸಭೆಯಲ್ಲೂ ಅಂಗೀಕರಿಸಲಾಗಿದೆ.
ಆದರೆ, ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಅಗತ್ಯವಿದೆ. ಇದೇ ಕಾರಣಕ್ಕಾಗಿ ಪ್ರಸ್ತಾವನೆಯನ್ನ ಕೇಂದ್ರಕ್ಕೆ ರವಾನಿಸಲಾಗಿದೆ. ಬೆಂಗಾಲಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ರಾಜ್ಯವನ್ನು ಬಾಂಗ್ಲಾ ಎಂದು ಕರೆಯಲಾಗುವುದು ಎಂದು ಗೊತ್ತುವಳಿಯಲ್ಲಿ ಹೇಳಲಾಗಿದೆ.
ಬೆಂಗಾಲಿಯಲ್ಲಿ ಬಾಂಗ್ಲಾ, ಇಂಗ್ಲಿಷ್‌ನಲ್ಲಿ ಬೆಂಗಾಲ್ ಮತ್ತು ಹಿಂದಿಯಲ್ಲಿ ಬೆಂಗಾಲ್ ಎಂದು ಮೂರು ಹೆಸರುಗಳ ರಾಜ್ಯ ಸರಕಾರದ ಪ್ರಸ್ತಾಪವನ್ನು ಈ ಹಿಂದೆ ಕೇಂದ್ರ ಸರಕಾರ ತಿರಸ್ಕರಿಸಿತ್ತು. ಆದರೆ, ಇದೀಗ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಕಳೆದ ಐದು ವರ್ಷಗಳಲ್ಲಿ ದೇಶಾದ್ಯಂತ ವಿವಿಧ ನಗರಗಳ ಹೆಸರು ಬದಲಾಯಿಸುವ ಪ್ರಸ್ತಾವನೆ ಸ್ವೀಕರಿಸಲಾಗಿದ್ದು, ಅವುಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಪಶ್ಚಿಮ ಬಂಗಾಲದ ಹೆಸರು ಬದಲಿಸೋದಕ್ಕೆ ಮುಂದಾಗಿದ್ದಾರೆ ಮಮತಾ ಬ್ಯಾನರ್ಜಿ!
ಟಿಎಂಸಿ ಸಂಸದ ಸೈದಾ ಅಹ್ಮದ್ ಕೇಳಿರುವ ಪ್ರಶ್ನೆಗೆ ಲಿಖಿತ ರೂಪದಲ್ಲಿ ಕೇಂದ್ರ ಸಚಿವರು ಉತ್ತರ ನೀಡಿದ್ದಾರೆ. ಪಾರಂಪರಿಕ ಸ್ಥಳಗಳ ಹೆಸರು ಬದಲಾವಣೆಗೆ ಕೇಂದ್ರ ಗೃಹ ಸಚಿವವಾಲಯ ಯಾವುದೇ ಮಾರ್ಗಸೂಚಿ ಹೊಂದಿಲ್ಲ.
2017ರಲ್ಲಿ ಆಂಧ್ರಪ್ರದೇಶದ ರಾಜಮಂಡ್ರಿಗೆ ರಾಹಮಹೇಂದ್ರವರಂ, 2018ರಲ್ಲಿ ಜಾರ್ಖಂಡ್ನ ಉಂಟಾರಿಗೆ ಶ್ರೀ ಬನ್ಶಿಧರ್ ನಗರ, ಉತ್ತರ ಪ್ರದೇಶಧ ಅಲಹಾಬಾದ್ಗೆ ಪ್ರಯಾಗ್ರಾಜ್, ಮಧ್ಯಪ್ರದೇಶದ ಹೋಶಂಗಾಬಾದ್ಗೆ ನರ್ಮದಾಪುರಂ ಎಂದು ಮರುನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.