ಗುವಾಹಟಿ (ಅಸ್ಸೋಂ): ಮಹಾರಾಷ್ಟ್ರದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ವಿರುದ್ಧ ಬಂಡಾಯ ಎದ್ದು, ಅಸ್ಸೋಂನ ಗುವಾಹಟಿಗೆ ಬಂದು 40 ಶಾಸಕರು ಬೀಡುಬಿಟ್ಟಾಗಿನಿಂದ ಇಲ್ಲಿನ ರಾಡಿಸನ್ ಬ್ಲೂ ಐಷಾರಾಮಿ ಹೋಟೆಲ್ ದೇಶದ ರಾಜಕಾರಣದ ಕೇಂದ್ರಸ್ಥಾನವಾಗಿ ಬದಲಾಗಿದೆ. ಈ ಹೋಟೆಲ್‌ನಲ್ಲಿ ಏಳು ದಿನಗಳಿಗೆ 70 ರೂಮ್ಗಳನ್ನು ಶಾಸಕರು ಬುಕ್ ಮಾಡಿದ್ದು, ದಿನಕ್ಕೆ ಲಕ್ಷಾಂತರ ರೂ. ಚಾರ್ಜ್ ಆಗುತ್ತಿದೆ.
ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆ ನೇತೃತ್ವದ ಶಾಸಕರು ಸೋಮವಾರ ತಡರಾತ್ರಿ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್ ಹೋಟೆಲ್‌ಗೆ ತೆರಳಿದ್ದರು. ಅಲ್ಲಿಂದ ಮತ್ತೊಂದು ಬಿಜೆಪಿ ಆಡಳಿತದ ರಾಜ್ಯವಾದ ಅಸ್ಸೋಂನ ಗುವಾಹಟಿಗೆ ಬುಧವಾರ ಬೆಳಗ್ಗೆ ಬಂದಿದ್ದಾರೆ.
ಇದನ್ನೂ ಓದಿ: ಉದ್ಧವ್ ಠಾಕ್ರೆಗೆ ರೆಬೆಲ್ಸ್ ಸೆಡ್ಡು: ಹೊಸ ಶಿವಸೇನಾ ನಾಯಕತ್ವ ಹುಟ್ಟುಹಾಕಿದ ಬಂಡಾಯ ಶಾಸಕರು
ಇಲ್ಲಿನ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ಬಂಡಾಯ ಶಾಸಕರನ್ನು ಅಸ್ಸೋಂ ರಾಜ್ಯ ಸಾರಿಗೆ ಸಂಸ್ಥೆಯ ಮೂರು ಐಷಾರಾಮಿ ಬಸ್‌ಗಳಲ್ಲಿ ರಾಡಿಸನ್ ಬ್ಲೂ ಹೋಟೆಲ್‌ಗೆ ಪೊಲೀಸ್ ಬೆಂಗಾವಲಿನಲ್ಲಿ ಕರೆತರಲಾಗಿದೆ. ಸದ್ಯ ಈ ಎಲ್ಲ ಶಾಸಕರು ಇದೇ ಹೋಟೆಲ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ.
ಮೂಲಗಳ ಪ್ರಕಾರ, ಐಷಾರಾಮಿ ಹೋಟೆಲ್‌ನಲ್ಲಿ ಒಟ್ಟು 70 ಕೊಠಡಿಗಳನ್ನು 56 ಲಕ್ಷ ರೂ.ಗೆ ಬುಕ್ ಮಾಡಲಾಗಿದೆ. ವಿಶಾಲವಾದ ಸಭಾಂಗಣ, ಹೊರಾಂಗಣ ಪೂಲ್, ಸ್ಪಾ ಮತ್ತು ಐದು ರೆಸ್ಟೋರೆಂಟ್‌ಗಳನ್ನು ಈ ಹೋಟೆಲ್ ಹೊಂದಿದೆ. ಆಹಾರ ಮತ್ತು ಇತರ ಸೇವೆಗಳಿಗೆ ದಿನಕ್ಕೆ ಅಂದಾಜು ವೆಚ್ಚ 8 ಲಕ್ಷ ರೂ. (ಏಳು ದಿನಕ್ಕೆ 56 ಲಕ್ಷ ರೂ.) ವೆಚ್ಚವಾಗುತ್ತಿದೆ. ಒಟ್ಟು ಏಳು ದಿನಗಳಿಗೆ 1.12 ಕೋಟಿ ರೂ. ಹೋಟೆಲ್ ಬಿಲ್ ಮಾಡಲಾಗಿದೆಯಂತೆ.
ಇದನ್ನೂ ಓದಿ: ತಿಂಗಳ ಹಿಂದಷ್ಟೇ ಕಾಂಗ್ರೆಸ್ ಬಗ್ಗೆ ಮರುಕಪಟ್ಟಿದ್ದ ಶಿವಸೇನೆಗೀಗ ಮರ್ಮಾಘಾತ! ಇಲ್ಲಿದೆ ಸಂಪೂರ್ಣ ಚಿತ್ರಣ