ಮುಂಬೈ (ಮಹಾರಾಷ್ಟ್ರ): ಶಾಸಕರು ನಾನು ಮುಖ್ಯಮಂತ್ರಿಯಾಗಿರುವುದು ಬೇಡ ಎಂದು ಬಯಸಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಯಾವುದೇ ಒಬ್ಬ ಶಾಸಕ ನಾನು ಸಿಎಂ ಆಗಿ ಮುಂದುವರಿಯಬಾರದು ಎಂದು ಬಯಸಿದರೆ, ನಾನು ಬಂಗಲೆಯಿಂದ (ಸಿಎಂ ಅಧಿಕೃತ ನಿವಾಸ) ಖಾಸಗಿ ನಿವಾಸ 'ಮಾತೋಶ್ರೀ'ಗೆ ನನ್ನೆಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಿದ್ಧ ಎಂದರು.
ನನ್ನ ಸ್ವಂತ ಜನರಿಗೆ (ಶಾಸಕರು) ನಾನು ಬೇಡವಾದಾಗ ನಾನೇನು ಹೇಳಬಲ್ಲೆ?, ಅವರಿಗೆ ನನ್ನ ವಿರುದ್ಧ ಏನಾದರು ಇದ್ದರೆ ಸೂರತ್‌ನಲ್ಲಿ ಇದನ್ನೆಲ್ಲ ಹೇಳುವ ಅಗತ್ಯವೇನಿತ್ತು?. ಇಲ್ಲಿಗೆ ಬಂದು ನನ್ನ ಮುಖ ನೋಡಿ ಹೇಳಬಹುದಿತ್ತಲ್ಲವೇ? ಎಂದು ಉದ್ಧವ್ ಠಾಕ್ರೆ ಬೇಸರ ವ್ಯಕ್ತಪಡಿಸಿದರು.
ಅಲ್ಲದೇ, ನಮ್ಮ ಶಾಸಕರೊಂದಿಗೆ ಏನಾಗುತ್ತಿದೆ ಮತ್ತು ಅವರು ಎಲ್ಲಿಗೆ ಹೋಗುತ್ತಿದ್ದಾರೆ ಅಥವಾ ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುವುದಿಲ್ಲ. ಆದರೆ, ಇದು ಬಾಳಾಸಾಹೇಬರ ಶಿವಸೇನೆ ಅಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಬಾಳಾ ಸಾಹೇಬರ ಚಿಂತನೆಗಳೇನು ಎಂಬುದನ್ನು ಅವರೇ ಹೇಳಬೇಕು. ಹಿಂದೂತ್ವವೇ ನಮ್ಮ ಜೀವ ಎಂದು ತಿಳಿದುಕೊಂಡ ಕಾಲದ ಶಿವಸೇನೆಯೇ ಇಂದಿಗೂ ಕೂಡಾ ಇದೆ ಎಂದು ಸ್ಪಪ್ಟಪಡಿಸಿದರು.
ಇದನ್ನೂ ಓದಿ: 'ಏಕನಾಥ ಬಂಡಾಯ ಗುಂಪಿನಿಂದ ಅಪಹರಣ': ಮುಂಬೈಗೆ ಮರಳಿದ 'ಶಿವಸೈನಿಕರು' ಹೇಳಿದ್ದು ರೋಚಕ ಕಥೆ!
ಇದೇ ವೇಳೆ ಶಸ್ತ್ರಚಿಕಿತ್ಸೆ ಮತ್ತು ಆರೋಗ್ಯದ ಕಾರಣದಿಂದ ಕಳೆದ ಕೆಲ ತಿಂಗಳಿಂದ ಜನರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ನಿಜ. ಆದರೆ, ಈಗ ನಾನು ಜನರನ್ನು ಭೇಟಿಯಾಗಲು ಆರಂಭಿಸಿದ್ದೇನೆ ಎಂದು ಸಿಎಂ ಹೇಳಿದರು. 2019ರಲ್ಲಿ ಮೂರೂ ಪಕ್ಷಗಳು (ಶಿವಸೇನೆ, ಕಾಂಗ್ರೆಸ್, ಎನ್ಸಿಪಿ) ಒಗ್ಗೂಡಿದಾಗ ಶರದ್ ಪವಾರ್ ನನಗೆ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ಹೊರಬೇಕು ಎಂದು ಹೇಳಿದ್ದರು. ನನಗೆ ಈ ಮೊದಲು ಇದರ ಅನುಭವವೂ ಇರಲಿಲ್ಲ. ಆದರೂ, ನಾನು ಜವಾಬ್ದಾರಿ ವಹಿಸಿಕೊಂಡೆ. ಶರದ್ ಪವಾರ್ ಮತ್ತು ಸೋನಿಯಾ ಗಾಂಧಿ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ಈಗಲೂ ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಎಂದು ಠಾಕ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನೊಂದಿಗೆ 40 ಶಾಸಕರಿದ್ದಾರೆ, ಬಾಳಾ ಠಾಕ್ರೆ 'ಹಿಂದುತ್ವ' ತತ್ವಕ್ಕೆ ಬದ್ಧ: ಏಕನಾಥ ಶಿಂಧೆ