ಬೆಂಗಳೂರು: ನಾನೊಂದು ವೇಳೆ ತಪ್ಪು ಮಾಡಿದ್ದೇ ಆದರೆ ವಿಧಾನಸೌಧ ಮತ್ತು ಹೈಕೋರ್ಟ್ ಎದುರು ನಿಂತು ನನ್ನ ಶಿರಚ್ಛೇದ ಮಾಡಿಕೊಳ್ಳಲು ಸಿದ್ಧ.. ಅಂಥದೊಂದು ನಿಷ್ಠೆಯಿಂದ ನ್ಯಾಯಾಧೀಶನಾಗಿ ನಾನು ಕೆಲಸ ಮಾಡುತ್ತಿರುವೆ ಎಂದು ತೀವ್ರ ಭಾವಾವೇಶದಲ್ಲಿ ಹೇಳಿದರು ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ.
ಇಂಥದೊಂದು ಘಟನೆ ನಡೆದಿದ್ದು ಶುಕ್ರವಾರದಂದು. ಕೋರ್ಟ್ ಕಲಾಪಗಳ ಸಮಯದಲ್ಲಿ ಕೆಲ ವಕೀಲರು ನ್ಯಾಯಮೂರ್ತಿಗಳ ಕಾರ್ಯವೈಖರಿಯ ಬಗ್ಗೆ ನಿರಾಧಾರ ಆರೋಪಗಳನ್ನು ಮಾಡುತ್ತಿರುವ ಬಗ್ಗೆ ನ್ಯಾಯಮೂರ್ತಿ ಬಿ. ವೀರಪ್ಪ ತಮ್ಮ ನೋವು ಹಾಗೂ ಆಕ್ರೋಶಗಳನ್ನು ಹೀಗೆ ತೋಡಿಕೊಂಡರು.
ಋತುರಾಜ್ ಅವಸ್ಥಿ ಅವರಿಗೆ ಬೀಳ್ಕೊಡುಗೆ ಸಮಾರಂಭ: ಸೇವೆಯಿಂದ ನಿವೃತ್ತರಾಗುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಅವರಿಗೆ ಬೆಂಗಳೂರು ವಕೀಲರ ಸಂಘದ ವತಿಯಿಂದ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ವಕೀಲರ ಸಮೂಹವನ್ನುದ್ದೇಶಿಸಿ ನ್ಯಾಯಮೂರ್ತಿ ವೀರಪ್ಪ ಮಾತನಾಡಿದರು.
ಗುರುವಾರ ಕೋರ್ಟ್ ಹಾಲ್ನಲ್ಲಿ ನಡೆದ ಅಹಿತಕರ ಘಟನೆಯೊಂದನ್ನು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಅವರ ಗಮನಕ್ಕೆ ತಂದ ಅವರು, ಇಂಥ ನಿರ್ಲಜ್ಜ ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು. ಕೋರ್ಟ್ ಹಾಲ್ ಘಟನೆಗೆ ಸುಬ್ಬಾರೆಡ್ಡಿಯವರೂ ಸಾಕ್ಷಿಯಾಗಿದ್ದರು.
ನ್ಯಾಯಮೂರ್ತಿ ವೀರಪ್ಪ, ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ ವಿಭಾಗೀಯ ಪೀಠವು ನ್ಯಾಯಾಂಗ ನಿಂದನೆ ಪ್ರಕರಣವೊಂದರ ಕುರಿತು ವಿಚಾರಣೆ ನಡೆಸುತ್ತಿರುವ ಸಮಯದಲ್ಲಿ ವಕೀಲರೊಬ್ಬರು ಬೇಕಾಬಿಟ್ಟಿಯಾಗಿ ವರ್ತಿಸಿ, "ನಾನು ನಿಮ್ಮ ವಿರುದ್ಧ ಮೂರು ಬಾರಿ ದೂರು ನೀಡಿದ್ದೇನೆ." ಎಂದು ಪದೇ ಪದೆ ಹೇಳುತ್ತಿದ್ದರು.
ನ್ಯಾಯಾಧೀಶರು ಗಾಜಿನ ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಿರುತ್ತಾರೆ ಎಂದು ಹೇಳಿದ ನ್ಯಾಯಮೂರ್ತಿ ಬಿ. ವೀರಪ್ಪ, ವಕೀಲರ ಸಂಘದ ಯಾವುದೇ ಸದಸ್ಯರು ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದರೆ, ವಕೀಲರ ಸಂಘವು ನ್ಯಾಯಾಂಗದ ಬೆಂಬಲಕ್ಕೆ ನಿಲ್ಲುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಸುದರ್ಶನ ಚಕ್ರ ಪ್ರಯೋಗಿಸಿ: ನ್ಯಾಯಾಧೀಶರು ಒಂದು ಹಂತದವರೆಗೆ ಇಂಥ ಕೆಟ್ಟ ವರ್ತನೆಯನ್ನು ಸಹಿಸಿಕೊಳ್ಳಬಹುದು. ಆದರೆ, ಒಂದು ಹಂತ ಮೀರಿದ ನಂತರ ಇಂಥ ವಕೀಲರ ಮೇಲೆ ಸುದರ್ಶನ ಚಕ್ರವನ್ನು ಪ್ರಯೋಗಿಸಲೇಬೇಕಾಗುತ್ತದೆ ಎಂದು ಅವರು ಹೇಳಿದರು. ಭಾವಾವೇಶದಲ್ಲಿ ಹೇಳಿದ ಮಾತುಗಳಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆಯಾಚಿಸುವುದಾಗಿಯೂ ನ್ಯಾಯಮೂರ್ತಿ ವೀರಪ್ಪ ತಿಳಿಸಿದರು.
ನ್ಯಾಯಮೂರ್ತಿ ವೀರಪ್ಪ ಅವರ ಆಕ್ರೋಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಬ್ಬಾರೆಡ್ಡಿ, ಈ ಕುರಿತು ವಕೀಲರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗುವುದು ಹಾಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೈಕೋರ್ಟ್ ಸಹ ಸುದರ್ಶನ ಚಕ್ರ ಪ್ರಯೋಗಿಸಲಿ: ಕೆಲ ಟ್ರಯಲ್ ಕೋರ್ಟ್ಗಳಲ್ಲಿನ ನ್ಯಾಯಾಧೀಶರು ವಕೀಲರೊಂದಿಗೆ ನಡೆದುಕೊಳ್ಳುವ ರೀತಿಗೆ ಹೈಕೋರ್ಟ್ ಅಂಥ ನ್ಯಾಯಾಧೀಶರ ವಿರುದ್ಧವೂ ಸುದರ್ಶನ ಚಕ್ರ ಪ್ರಯೋಗಿಸಲಿ ಎಂದು ಹೇಳುವುದನ್ನು ಮರೆಯಲಿಲ್ಲ ವಿವೇಕ ಸುಬ್ಬಾರೆಡ್ಡಿ.