ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಮತ್ತು ಭಾರತದ ಫಾರ್ಮಾ ದೈತ್ಯ ಹೆಟೆರೊ 2021ರ ಆರಂಭದ ವೇಳೆಗೆ ಭಾರತದಲ್ಲಿ 100 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಒಪ್ಪಂದ ಮಾಡಿಕೊಂಡಿವೆ. ರಷ್ಯಾದ ಆರ್‌ಡಿಐಎಫ್ ಮತ್ತು ಹೆಟೆರೊ ನಡುವಿನ ಈ ಜಂಟಿ ಘೋಷಣೆ, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬಲ ನೀಡಿದೆ.
ಕೋವಿಡ್-19 ಚಿಕಿತ್ಸೆಗಾಗಿ ಹೆಚ್ಚು ನಿರೀಕ್ಷಿತ ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದನಾ ಪಾಲುದಾರರಾಗಿ ಆರ್ಡಿಎಫ್ಐನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಕ್ಕೆ ನಾವು ಸಂತೋಷಪಡುತ್ತೇವೆ. ಭಾರತದಲ್ಲಿ ಕೋವಿಡ್ ಲಸಿಕೆ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳನ್ನು ನಾವು ಎದುರು ನೋಡುತ್ತಿರುವಾಗ, ಸ್ಥಳೀಯವಾಗಿ ಲಸಿಕೆ ಉತ್ಪಾದನೆ ಅತ್ಯಂತ ಮಹತ್ವವೆನಿಸಿದೆ. ಈ ಸಹಯೋಗವು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಮ್ಮ ಬದ್ಧತೆಯ ಮತ್ತೊಂದು ಹೆಜ್ಜೆಯಾಗಿದೆ. ಪ್ರಧಾನಿ ಹೇಳಿದಂತೆ, ಇದು 'ಮೇಕ್ ಇನ್ ಇಂಡಿಯಾ' ಅಭಿಯಾನದ ಉದ್ದೇಶವನ್ನು ಅರಿತುಕೊಳ್ಳುವ ಒಂದು ಭಾಗವಾಗಿದೆ ಎಂದು ಹೆಟೆರೊ ಲ್ಯಾಬ್ಸ್ ಲಿಮಿಟೆಡ್‌ನ ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ದೇಶಕ ಬಿ.ಮುರಳಿ ಕೃಷ್ಣ ರೆಡ್ಡಿ ಹೇಳಿದ್ದಾರೆ.
ಭಾರತವು ಈಗಾಗಲೇ ರಷ್ಯಾದ ಲಸಿಕೆಯ 2 ಮತ್ತು 3ನೇ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದೆ. ಸ್ಪುಟ್ನಿಕ್ ವಿ ಇತ್ತೀಚಿನ ಮಧ್ಯಂತರ ಕ್ಲಿನಿಕಲ್ ಟ್ರಯಲ್ ಫಲಿತಾಂಶವು ಲಸಿಕೆಯ ಹೆಚ್ಚಿನ ಪರಿಣಾಮಕಾರಿತ್ವವನ್ನು ಪುನರ್ ದೃಢಪಡಿಸಿದೆ. ಲಸಿಕೆಯ ನಿರ್ಣಾಯಕ ಕ್ಲಿನಿಕಲ್ ಟ್ರಯಲ್ ಪ್ರೋಟೋಕಾಲ್ಗೆ ಅನುಸಾರವಾಗಿ ಎರಡನೇ ಹಂತ ತಲುಪಿದ ನಂತರ ಲಸಿಕೆ ಅಥವಾ ಪ್ಲಸೀಬೊದ ಮೊದಲ ಡೋಸ್ ಪಡೆದ ಸ್ವಯಂ ಸೇವಕರಲ್ಲಿ 28 ದಿನಗಳ ನಂತರ ಶೇ. 91.4ರಷ್ಟು ಪರಿಣಾಮ ಕಂಡು ಬಂದಿದೆ.