ಮುಂಬೈ (ಮಹಾರಾಷ್ಟ್ರ) : ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದಾಗಿ (ಆರ್‌ಎಸ್‌ಎಸ್) ಭಾರತದೊಂದಿಗೆ ಗಡಿ ವಿವಾದ ಮತ್ತು ಭಯೋತ್ಪಾದನೆ ವಿಚಾರವಾಗಿ ಮಾತುಕತೆ ಸ್ಥಗಿತಗೊಂಡಿದೆ ಎಂದಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ರಾಜ್ಯಸಭಾ ಸದಸ್ಯ ಮತ್ತು ಶಿವಸೇನೆ ಮುಖಂಡ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.
ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ಪಾಕಿಸ್ತಾನವೇ ಕಾರಣವಾಗಿದೆ. ಪಾಕಿಸ್ತಾನವೇ ತಾಲಿಬಾನ್ನ ಸೃಷ್ಟಿಕರ್ತ ರಾಷ್ಟ್ರವಾಗಿದೆ ಎಂದು ಎಎನ್ಐಗೆ ಸಂಜಯ್ ರಾವತ್ ತಿಳಿಸಿದ್ದಾರೆ. ತಾಲಿಬಾನ್ ಸಹಾಯದಿಂದ ಪಾಕಿಸ್ತಾನ ಹರಡಿದ ಭಯೋತ್ಪಾದನೆಯ ಪರಿಣಾಮವನ್ನು ಇಡೀ ಜಗತ್ತು ಅನುಭವಿಸಬೇಕಾಗಿದೆ, ಇಮ್ರಾನ್ ಖಾನ್ ಅವರನ್ನು ನಂಬಲು ಸಾಧ್ಯವಿಲ್ಲ ಎಂದು ರಾವತ್ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದೆ. ಇದು ಇಡೀ ದೇಶದ ಜನರ ಭಾವನೆ ಎಂದು ರಾವತ್ ಹೇಳಿದ್ದಾರೆ. 'ಆರ್‌ಎಸ್‌ಎಸ್ ಐಡಿಯಾಲಜಿ' ಬಗ್ಗೆ ಪಾಕ್ ಪ್ರಧಾನಿ ಟೀಕಿಸುವುದು ಸರಿಯಲ್ಲ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ, ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಉಲ್ಬಣವಾಗಿದೆ. ತಾಲಿಬಾನ್ ಮತ್ತು ಅಫ್ಘಾನ್ ಭದ್ರತಾ ಪಡೆಗಳ ವಿರುದ್ಧ ಸಂಘರ್ಷದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಆಫ್ಘನ್ನ ಬಹುಪಾಲು ಪ್ರದೇಶದವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ತಾಲಿಬಾನಿಗಳು ಘೋಷಿಸಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ವದಂತಿ: ವರದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದ ಸಿಎಂ BSY
ಇನ್ನು ಶುಕ್ರವಾರಷ್ಟೇ ತಾಷ್ಕೆಂಟ್ನಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್ ಭಾರತದೊಂದಿಗೆ ಮಾತುಕತೆ ಸ್ಥಗಿತವಾಗಲು ಆರ್‌ಎಸ್‌ಎಸ್ ಕಾರಣ ಎಂದಿದ್ದರು ಮಾತ್ರವಲ್ಲದೇ ಪಾಕ್ ತಾಲಿಬಾನಿಗಳನ್ನು ನಿಯಂತ್ರಿಸುತ್ತಿದೆಯೇ ಎಂದು ಎಎನ್ಐ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡದೇ ನುಣುಚಿಕೊಂಡಿದ್ದರು. ಇದೇ ವಿಚಾರವಾಗಿ ರಾವತ್ ಇಮ್ರಾನ್ ವಿರುದ್ಧ ಹರಿಹಾಯ್ದಿದ್ದಾರೆ.