ಸೂರತ್(ಗುಜರಾತ್): ಗುಜರಾತ್ನಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗೆ ಶಿಕ್ಷೆ ವಿಧಿಸುತ್ತಿದ್ದಂತೆ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಸೂರತ್ನ ನ್ಯಾಯಾಲಯ 27 ವರ್ಷದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಶಿಕ್ಷೆ ಘೋಷಣೆ ಮಾಡ್ತಿದ್ದಂತೆ ಅಪರಾಧಿ ನ್ಯಾಯಾಧೀಶರ ಕಡೆಗೆ ಚಪ್ಪಲಿ ಎಸೆದಿದ್ದಾನೆ.
ಐದು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಪಿಎಸ್ ಕಲಾ ಅವರು ಶಿಕ್ಷೆ ಪ್ರಕಟಿಸಿದ್ದು, ಇದರ ಬೆನ್ನಲ್ಲೇ ಅಪರಾಧಿ ಸುಜಿತ್ ಸಾಕೇತ್ ಕೋಪಗೊಂಡು ನ್ಯಾಯಾಧೀಶರ ಕಡೆಗೆ ಚಪ್ಪಲಿ ಎಸೆದಿದ್ದಾನೆ.
ಇದನ್ನೂ ಓದಿರಿ: ಚಂಡೀಗಢದಲ್ಲಿ ಬಿಜೆಪಿ ಶಾಸಕನ ಕಾರಿಗೆ ಬೆಂಕಿ ಹಚ್ಚಿ ದುಷ್ಕರ್ಮಿ ಪರಾರಿ
ಪ್ರಕರಣದ ಸಂಪೂರ್ಣ ವಿವರ
ಮಧ್ಯಪ್ರದೇಶದ ನಿವಾಸಿ ಸಾಕೇತ್ ಏಪ್ರಿಲ್ 30ರಂದು ಐದು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದನು. ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನ ನೋಡಿ, ಚಾಕೋಲೇಟ್ ನೀಡುವ ನೆಪದಲ್ಲಿ ದುಷ್ಕೃತ್ಯವೆಸಗಿ, ಆಕೆಯ ಕೊಲೆ ಮಾಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಜಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆತನ ಬಂಧನ ಮಾಡಲಾಗಿತ್ತು. ಜೊತೆಗೆ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿತ್ತು.
ವಿಚಾರಣೆ ನಡೆಸಿದ ಕೋರ್ಟ್ 26 ಸಾಕ್ಷಿಗಳ ಹೇಳಿಕೆ ಪಡೆದುಕೊಂಡು, ಇದೀಗ ಆರೋಪಿ ತಪ್ಪಿತಸ್ಥ ಎಂದು ಹೇಳುವ ಮೂಲಕ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಇದರ ಬೆನ್ನಲ್ಲೇ ಅಪರಾಧಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ.