ನವದೆಹಲಿ: ಮಹಿಳೆಯರು ಹಾಕಿಕೊಳ್ಳುವ ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಳ್ಳಿ ಶಾಸಕ ರೇಣುಕಾಚಾರ್ಯ ವಿವಾದಿತ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೇ ಕ್ಷಮೆಯಾಚನೆ ಮಾಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು, ಮಹಿಳೆಯರು ಬಿಕನಿ ಹಾಕಿಕೊಳ್ಳುವುದು ಅವರ ಮೂಲಭೂತ ಹಕ್ಕು ಎಂದಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ವಿದ್ಯಾರ್ಥಿನಿಯರು ಮೈತುಂಬ ಬಟ್ಟೆ ಹಾಕಿಕೊಳ್ಳಬೇಕು. ಯಾಕೆಂದರೆ ಅವರು ಹಾಕಿಕೊಳ್ಳುವ ಉಡುಪು ನೋಡಿ ಪುರುಷರು ಉದ್ರೇಕ್ತಗೊಳ್ಳುತ್ತಾರೆ. ಅದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತದೆ. ಬಿಕಿನಿ ಎಂಬ ಕೀಳು ಮಟ್ಟದ ಶಬ್ದ ಬಳಕೆ ಮಾಡಿರುವ ಪ್ರಿಯಾಂಕಾ ತಕ್ಷಣವೇ ಕ್ಷಮೆಯಾಚನೆ ಮಾಡಬೇಕು ಎಂದಿದ್ದಾರೆ. ಸಮವಸ್ತ್ರ ವಿಷಯದ ನಡುವೆ ಬಿಕಿನಿ ಪದ ಬಳಕೆ ತಪ್ಪು. ದೇಶದ ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಸರ್ವಾಂಗೀಣ ಉನ್ನತಿಗೆ ನಮ್ಮ ಆದ್ಯತೆ.. ಆದ್ರೆ, ಆ ಒಂದು ರಾಜ್ಯದಿಂದ ಅಸಹಕಾರ: ಪ್ರಧಾನಿ ಮೋದಿ
ನವದೆಹಲಿಯಲ್ಲಿ ಮಾತನಾಡಿರುವ ರೇಣುಕಾಚಾರ್ಯ, ಹಿಜಾಬ್ ವಿವಾದದ ಹಿಂಧೆ ಎಸ್ಡಿಪಿಐ ಮತ್ತು ಪಿಎಫ್ಐ ಕೈವಾಡವಿದೆ. ವೋಟ್ ಬ್ಯಾಂಕ್ಗೋಸ್ಕರ ಕಾಂಗ್ರೆಸ್ ಅಲ್ಪಸಂಖ್ಯಾತರನ್ನ ಬಳಕೆ ಮಾಡಿಕೊಳ್ಳುತ್ತಿದೆ. ರಾಜಕಾರಣದಲ್ಲಿ ನಾವು ಕೇಸರಿಕರಣ ಮಾಡುತ್ತೇವೆ. ಆದರೆ, ಶಿಕ್ಷಣದಲ್ಲಿ ಕೇಸರಿಕರಣ ಮಾಡಲ್ಲ ಎಂದಿದ್ದಾರೆ.
ರೇಣುಕಾಚಾರ್ಯ ನೀಡಿರುವ ಹೇಳಿಕೆ ಹೆಚ್ಚು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕ್ಷಮೆಯಾಚನೆ ಮಾಡಿರುವ ಅವರು, ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಕ್ಷಮೆಯಾಚನೆ ಮಾಡಿದ್ದಾರೆ.