ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಪೋಷಕರೊಂದಿಗೆ ಕಾಂಗ್ರೆಸ್ ನಾಯಕ ಫೋಟೋ ಹಾಕಿದ್ದಕ್ಕೆ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ತೆಗೆಯುವಂತೆ ಫೇಸ್‌ಬುಕ್ ರಾಹುಲ್ ಗಾಂಧಿಗೆ ಹೇಳಿದ ಒಂದು ದಿನದ ನಂತರ, ಅವರ ಪಕ್ಷವು ಮೋದಿ ಸರ್ಕಾರವು ವಾಸ್ತವದಿಂದ ದಿಕ್ಕು ತಪ್ಪಿಸುವ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದೆ.
ಈಟಿವಿ ಭಾರತ ಜೊತೆ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್, ಸಾಮಾಜಿಕ ಮಾಧ್ಯಮ ವೇದಿಕೆಗಳು ಈ ಸರ್ಕಾರದ ಕೈಗೊಂಬೆಗಳಾಗುವ ಬದಲು ಸ್ವತಂತ್ರ ವಿಶ್ವಾಸಾರ್ಹ ವೇದಿಕೆಗಳಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸಬೇಕು ಎಂದು ನಾನು ಸ್ಪಷ್ಟವಾಗಿ ಭಾವಿಸುತ್ತೇನೆ ಎಂದಿದ್ದಾರೆ.
ಮುಖ್ಯ ವಿಷಯ ಎಂದರೆ ಆಕೆಯ ಪೋಷಕರು ನ್ಯಾಯಕ್ಕಾಗಿ ಇನ್ನೂ ಅಳುತ್ತಿದ್ದಾರೆ. ನ್ಯಾಯದ ಖಾತ್ರಿಗಾಗಿ ಅವರ ಜೊತೆ ನಿಂತ ಯಾರೋ ಒಬ್ಬರನ್ನು ಟಾರ್ಗೆಟ್ ಮಾಡಲಾಗಿದೆ. ಅನುಮತಿ ಪಡೆದ ನಂತರವೇ ನಾವು ಚಿತ್ರವನ್ನು ಪೋಸ್ಟ್ ಮಾಡಿದ್ದೇವೆ. ಸಂತ್ರಸ್ತೆಯ ಪೋಷಕರಿಂದ ಮತ್ತು ಅವರ ಒಪ್ಪಿಗೆ ಪತ್ರದ ಪ್ರತಿಯನ್ನು ನಾವು ಟ್ವಿಟರ್‌ನೊಂದಿಗೆ ಹಂಚಿಕೊಂಡಿದ್ದೇವೆ. ಇದು ಸರ್ಕಾರದ ಆಜ್ಞೆಯ ಮೇರೆಗೆ ಮಾಡಿದ ದೌರ್ಜನ್ಯ ಎಂದು ನಾವು ಭಾವಿಸುತ್ತೇವೆ ಎಂದು ಆರೋಪಿಸಿದರು.
ಈ ಹಿಂದೆ, ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಫೇಸ್ಬುಕ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದಿಂದ (NCPCR) ಸಮನ್ಸ್ ಜಾರಿಗೊಳಿಸಲಾಗಿತ್ತು. ಟ್ವಿಟರ್ ಕೂಡ ಈ ವಿಚಾರವಾಗಿ ಅವರ ಖಾತೆಯನ್ನು ಲಾಕ್ ಮಾಡಿತ್ತು.
ಇನ್ನೊಬ್ಬ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಮಾತನಾಡಿ, ಸರ್ಕಾರವು ಇಂತಹ ತಂತ್ರಗಳನ್ನು ಬಳಸುವುದರ ಮೂಲಕ ನೈಜ ಸಮಸ್ಯೆಗಳಿಂದ ದೂರವಾಗುತ್ತಿದೆ ಎಂದು ಆರೋಪಿಸಿದರು, ಈ ದಿಕ್ಕುತಪ್ಪಿಸುವ ತಂತ್ರಗಳನ್ನು ಬಳಸಿಕೊಂಡು ಅದರ ಹೊಣೆಗಾರಿಕೆಯಿಂದ ಓಡಿಹೋಗಲು ಬಯಸುತ್ತಿದ್ದಾರೆ. ನಾವು ಅದನ್ನು ಆ ರೀತಿ ಆಗಲು ಬಿಡುವುದಿಲ್ಲ ಎಂದು ಸವಾಲ್ ಹಾಕಿದರು.