ಮುಂಬೈ(ಮಹಾರಾಷ್ಟ್ರ): ಹನುಮಾನ್ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಾಣಾ ದಂಪತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅದನ್ನ ರದ್ದುಗೊಳಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ಇದೀಗ ವಜಾಗೊಂಡಿದೆ. ತಮ್ಮ ಬಂಧನವನ್ನ ಪ್ರಶ್ನೆ ಮಾಡಿ, ಮುಂಬೈ ಹೈಕೋರ್ಟ್ನಲ್ಲಿ ಸಂಸದೆ ನವನೀತ್ ಕೌರ್ ಹಾಗೂ ಅವರ ಪತಿ ಶಾಸಕ ರವಿ ರಾಣಾ ಅರ್ಜಿ ಸಲ್ಲಿಕೆ ಮಾಡಿದ್ದರು. ಅದರ ವಿಚಾರಣೆ ನಡೆಸಿದ ಹೈಕೋರ್ಟ್ ವಜಾಗೊಳಿಸಿದೆ.
ರಾಣಾ ದಂಪತಿಗಳ ಬಂಧನಕ್ಕೆ ಬಂದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅದನ್ನ ರದ್ದುಗೊಳಿಸುವಂತೆ ಅಮರಾವತಿ ಸಂಸದೆ ನವನೀತ್ ಹಾಗೂ ಆಕೆಯ ಪತಿ ರವಿ ರಾಣಾ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಕೇಸ್ನಲ್ಲಿ ದಂಪತಿಗಳಿಗೆ ಹೈಕೋರ್ಟ್ನಿಂದಲೂ ಹಿನ್ನೆಡೆಯಾಗಿದೆ.
ಇದನ್ನೂ ಓದಿ: ಹಿಂದುತ್ವದಿಂದ ಶಿವಸೇನೆ ಸಂಪೂರ್ಣ ಹಿಂದೆ ಸರಿದಿದೆ... ಸ್ಪೀಕರ್ಗೆ ಪತ್ರ ಬರೆದ ನವನೀತ್ ಕೌರ್
ನ್ಯಾಯಾಲಯವು ರಾಣಾ ದಂಪತಿಗೆ ಈಗಾಗಲೇ 14 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ನವನೀತ್ ರಾಣಾ ಅವರನ್ನು ಮುಂಬೈನ ಬೈಕುಲ್ಲಾ ಜೈಲಿಗೆ ಮತ್ತು ಅವರ ಪತಿಯನ್ನು ನವಿ ಮುಂಬೈನ ತಲೋಜಾ ಜೈಲಿಗೆ ಕಳುಹಿಸಿದೆ. ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ 'ಮಾತೋಶ್ರೀ' ಹೊರಗೆ ಹನುಮಾನ್ ಚಾಲೀಸಾ ಪಠಣಕ್ಕೆ ಕರೆ ನೀಡಿದ ನಂತರ ದಂಪತಿಯನ್ನು ಶನಿವಾರ ಪೊಲೀಸರು ಬಂಧನ ಮಾಡಿದ್ದಾರೆ.