ಅಯೋಧ್ಯೆ (ಉತ್ತರ ಪ್ರದೇಶ): "ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜ.22 ರಂದು ಮಧ್ಯಾಹ್ನ 1 ಗಂಟೆಯೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಮಂತ್ರಿ ಮತ್ತು ಇತರ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ" ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದರು. ಅಯೋಧ್ಯೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಂಪ್ರದಾಯದಂತೆ 1000 ಬುಟ್ಟಿಗಳಲ್ಲಿ ಉಡುಗೊರೆಗಳು ನೇಪಾಳದ ಜನಕ್‌ಪುರ ಮತ್ತು ಮಿಥಿಲಾ ಪ್ರದೇಶಗಳಿಂದ ಇಲ್ಲಿಗೆ ಬಂದಿವೆ. ಜ.20 ಮತ್ತು 21 ರಂದು ರಾಮಮಂದಿರ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ" ಎಂದರು.
"ಜನವರಿ 23 ರಿಂದ ರಾಮಮಂದಿರ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ. ಜ. 22 ರಂದು ರಾಮಮಂದಿರದ ಗರ್ಭ ಗುಡಿಯೊಳಗೆ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ, ಉತ್ತರ ಪ್ರದೇಶದ ಮುಖ್ಯಮಂತ್ರಿ, ನೃತ್ಯ ಗೋಪಾಲ್ ಜಿ ಮಹಾರಾಜ್, ಉತ್ತರ ಪ್ರದೇಶದ ಗವರ್ನರ್ ಮತ್ತು ದೇವಸ್ಥಾನದ ಎಲ್ಲಾ ಟ್ರಸ್ಟಿಗಳು ಉಪಸ್ಥಿತರಿರುತ್ತಾರೆ. 150ಕ್ಕೂ ಹೆಚ್ಚು ಸಂತರು, ವಿವಿಧ ಕ್ಷೇತ್ರಗಳ ಪ್ರಮುಖರು, ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ" ಎಂದು ಮಾಹಿತಿ ನೀಡಿದರು.
ರಾಮಮಂದಿರ ಉದ್ಘಾಟನೆಗೆ ಶಂಕರಾಚಾರ್ಯರು ಆಶೀರ್ವದಿಸಲಿ - ಕೇಂದ್ರ ಸಚಿವ ರಾಣೆ: ಮತ್ತೊಂದೆಡೆ, "ಭಾರತೀಯರ ಶತಮಾನಗಳ ಕನಸಾದ ರಾಮಮಂದಿರ ಉದ್ಘಾಟನೆಗೆ ಶಂಕರಾಚಾರ್ಯರು ಆಶೀರ್ವದಿಸಬೇಕೇ ಹೊರತು, ಟೀಕಿಸಬಾರದು. ಮಂದಿರವನ್ನು ರಾಜಕೀಯದ ಹಿನ್ನೆಲೆಯಲ್ಲಿ ಲೋಕಾರ್ಪಣೆ ಮಾಡುತ್ತಿಲ್ಲ" ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಹೇಳಿದ್ದರು. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಂದಿರ ನಿರ್ಮಾಣ ಸಂಪೂರ್ಣವಾಗಿಲ್ಲ. ಶಂಕರಾಚಾರ್ಯ ಪೀಠದ ಇಬ್ಬರು ಶ್ರೀಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಘೋಷಿಸಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ರಾಮಮಂದಿರ ನಿರ್ಮಾಣ ಪೂರ್ಣ ಹಂತದಲ್ಲಿದೆ. ಹಿಂದೂ ಧರ್ಮದ ಅಸ್ಮಿತೆಯಾಗಿ ಮಂದಿರವನ್ನು ನೋಡಲಾಗುತ್ತದೆ. ದಿವ್ಯದೇಗುಲದ ಉದ್ಘಾಟನೆಗೆ ವಿಶ್ವವೇ ಕಾತರದಿಂದ ಕಾದಿದೆ. ಇಂತಹ ದಿವ್ಯ ಕಾರ್ಯಕ್ರಮವನ್ನು ಶಂಕರಾಚಾರ್ಯ ಪೀಠದ ಇಬ್ಬರು ಶ್ರೀಗಳು ಟೀಕಿಸಿದ್ದು ಸರಿಯಲ್ಲ" ಎಂದಿದ್ದರು.
"ರಾಮಮಂದಿರ ನಿರ್ಮಾಣಕ್ಕೆ ಯಾರೂ ಮಾಡದ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಇಂತಹ ಮಹತ್ಕಾರ್ಯವನ್ನು ಬಿಜೆಪಿ ಆಡಳಿತದಲ್ಲಿ ಪೂರೈಸಲಾಗಿದೆ. ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ದೇವಸ್ಥಾನದ ಉದ್ಘಾಟನೆಗೆ ಬೆಂಬಲ ನೀಡಬೇಕೇ ಹೊರತು ಟೀಕೆ ಮಾಡುವುದಲ್ಲ" ಎಂದು ಕೇಂದ್ರ ಸಚಿವರು ಹೇಳಿದ್ದರು.
ಇದನ್ನೂ ಓದಿ: ರಾಮಮಂದಿರದ ಸಮೀಪ ಪ್ಲಾಟ್ ಖರೀದಿಸಿದ ಬಚ್ಚನ್