ನವದೆಹಲಿ: ರಾಮನ ಜನ್ಮಭೂಮಿ ವಿವಾದ ಕುರಿತಾದ ಐತಿಹಾಸಿಕ ತೀರ್ಪನ್ನು ಕಾನೂನಿನ ಆಧಾರದ ಮೇಲೆ ನೀಡಲಾಗಿದೆಯೇ ಹೊರತು ಧರ್ಮದ ಆಧಾರದ ಮೇಲೆ ನೀಡಿಲ್ಲ ಎಂದು ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್ ಹೇಳಿದರು.
ವಾರಣಾಸಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಅಯೋಧ್ಯೆ ವಿವಾದದ ತೀರ್ಪು ನನ್ನ ವೈಯಕ್ತಿಕ ನಿರ್ಧಾರವಲ್ಲ, ಅದು ಸುಪ್ರೀಂಕೋರ್ಟ್‌ನ ನಿರ್ಧಾರ. ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳು ಮೂರು-ನಾಲ್ಕು ತಿಂಗಳ ಅವಧಿಯಲ್ಲಿ 900 ಪುಟಗಳ ತೀರ್ಪು ಬರೆದಿದ್ದಾರೆ. ಈ ತೀರ್ಪು "ಕಾನೂನು ಮತ್ತು ಸಂವಿಧಾನವನ್ನು ಆಧರಿಸಿದೆಯೇ ಹೊರತು ಧರ್ಮವಲ್ಲ. ನ್ಯಾಯಾಧೀಶರಿಗೆ ಸಂವಿಧಾನವೇ ಧರ್ಮ" ಎಂದರು.
ಜಗಮೆಚ್ಚಿದ ಐತಿಹಾಸಿಕ ತೀರ್ಪು:
2019ರ ನವೆಂಬರ್ನಲ್ಲಿ ರಾಮ ಜನ್ಮಭೂಮಿ ಹಾಗೂ ಬಾಬ್ರಿ ಮಸೀದಿಗೆ ಸಂಬಂಧಿಸಿದ ತೀರ್ಪನ್ನು ನೀಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೀಠದ ನೇತೃತ್ವವನ್ನು ಗೊಗೊಯ್ ವಹಿಸಿದ್ದರು. ನ್ಯಾಯಾಲಯವು ವಿವಾದಿತ ಭೂಮಿಯನ್ನು ರಾಮ ಜನ್ಮಭೂಮಿ ಟ್ರಸ್ಟ್‌ಗೆ ನೀಡಿತ್ತು. ಜೊತೆಗೆ, ಫೈಜಾಬಾದ್ ಬಳಿ ಬಾಬರಿ ಮಸೀದಿ ನಿರ್ಮಾಣಕ್ಕೆ ಜಾಗ ನೀಡುವಂತೆಯೂ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿತ್ತು.