ನವದೆಹಲಿ: ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಮಸೂದೆ -2021 ಬಿಲ್ಗೆ ಬುಧವಾರ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಮಸೂದೆಯ ಪರಿಗಣನೆ ಮತ್ತು ಅಂಗೀಕಾರದ ಸಮಯದಲ್ಲಿ ವಿರೋಧ ಪಕ್ಷದ ಸಂಸದರು ಗದ್ದಲವನ್ನು ಸೃಷ್ಟಿಸಿದರು. ಜುಲೈ 28 ರಂದು ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಮಸೂದೆ ಅಂಗೀಕರಿಸುವಾಗ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು 'ಹವಾಯಿ ಚಪ್ಪಲ್ ಧರಿಸಿದ ಜನರಿಗೆ' ಹವಾಯಿ ಜಹಾಸ್( ವಿಮಾನ)ದಲ್ಲಿ ಪ್ರಯಾಣಿಸಲು ಅವಕಾಶ ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಸಿಂಧಿಯಾ, ವಿಮಾನ ಸೌಲಭ್ಯ ಹೊಂದುವ ಕನಸು ಕೂಡ ಕಂಡಿಲ್ಲದ ದರ್ಬಂಗದಂತಹ ಸ್ಥಳಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಆರು ವರ್ಷಗಳಲ್ಲಿ ಮೋದಿ ಸರ್ಕಾರವು ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಸಣ್ಣ ಪಟ್ಟಣಗಳಲ್ಲಿ ಸಹ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತದೆ ಎಂದು ಅವರು ಹೇಳಿದರು. ತಿದ್ದುಪಡಿಯು "ವಿಮಾನ ನಿಲ್ದಾಣಗಳ ಸಮೂಹ" ದ ಸುಂಕ ನಿರ್ಣಯಕ್ಕಾಗಿ ಕಾಯಿದೆಯಲ್ಲಿ ಒಂದು ನಿಬಂಧನೆಯನ್ನು ಸೇರಿಸುತ್ತದೆ.
2008ರ ಕಾಯ್ದೆಯಡಿ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರವನ್ನು ಸ್ಥಾಪಿಸಲಾಯಿತು. ಪ್ರಾಧಿಕಾರವು ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಸೇವೆಗಳಿಗೆ ಸುಂಕ ಮತ್ತು ಇತರ ಶುಲ್ಕಗಳನ್ನು ನಿರ್ಧರಿಸುತ್ತದೆ. ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ವಿಮಾನ ನಿಲ್ದಾಣಗಳನ್ನು ವಿಂಗಡಿಸಲು ಮತ್ತು ಪ್ರಮುಖ ವಿಮಾನ ನಿಲ್ದಾಣಗಳಾಗಿ ವರ್ಗೀಕರಿಸಲು ಅಧಿಕಾರವನ್ನು ನೀಡುತ್ತದೆ.