ನವದೆಹಲಿ : ರೈತರ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ನೋಯಿಸಿದ್ದಾರೆ ಎಂದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿ ಕೇವಲ ವ್ಯಕ್ತಿಯಲ್ಲ, ಅವರೊಂದು ಸಂಸ್ಥೆ ಇದ್ದಂತೆ ಎಂದು ಹೇಳಿದ್ದಾರೆ.
ಆರು ವರ್ಷಗಳ ಹಿಂದೆ ಪ್ರಧಾನಿ ಹುದ್ದೆಯನ್ನು ಸ್ವೀಕರಿಸುವ ಮೊದಲು 14 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿ ಅವರಿಗೆ ದೇಶದ ಜನರು ಬೆಂಬಲ ಮತ್ತು ಪ್ರೀತಿಯನ್ನು ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಚಿವರು ಹೇಳಿದ್ದಾರೆ.
"ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ. ಪ್ರಧಾನಮಂತ್ರಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು. ಪ್ರಧಾನಿ ಕೇವಲ ಒಬ್ಬ ವ್ಯಕ್ತಿಯಲ್ಲ, ಸಂಸ್ಥೆಯಾಗಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ನಾನು ಯಾವುದೇ ಮಾಜಿ ಪ್ರಧಾನಮಂತ್ರಿಯ ವಿರುದ್ಧ ನಿಂದನೀಯ ಮಾತುಗಳನ್ನು ಬಳಸಿಲ್ಲ. ಪ್ರಧಾನಮಂತ್ರಿಯ ವಿರುದ್ಧ 'ಮಾರ್ ಜಾ, ಮಾರ್ ಜಾ'(Mar ja Mar ja) ಎಂದು ಘೋಷಣೆ ಕೂಗಿದ್ದಾರೆ, ಇದರಿಂದ ನನಗೆ ನೋವುಂಟಾಗಿದೆ "ಎಂದಿದ್ದಾರೆ.
ಅವಹೇಳನಕಾರಿ ಘೋಷಣೆಗಳನ್ನು ಕೂಗುವ ಜನರನ್ನು ರೈತರು ದೂರವಿಡಬೇಕು, ಪ್ರಧಾನಿ ಹುದ್ದೆಯ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವುದು ಪ್ರತಿಪಕ್ಷಗಳ ಕರ್ತವ್ಯ ಎಂದಿದ್ದಾರೆ.
ಓದಿ ಮದುವೆಗೆ ಮತಾಂತರವಾಗುವುದನ್ನು ವೈಯಕ್ತಿಕವಾಗಿ ಒಪ್ಪುವುದಿಲ್ಲ : ರಾಜನಾಥ್ ಸಿಂಗ್
"ಪ್ರತಿಪಕ್ಷಗಳು ಅದರ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ನಾನು ಅವರಿಗೆ ಸಲಹೆ ನೀಡುತ್ತಿಲ್ಲ. ಆದರೆ, ಸಂಸ್ಥೆಗಳನ್ನು ಗೌರವಿಸಬೇಕು. ಸಂಸ್ಥೆಗಳು ದುರ್ಬಲಗೊಂಡರೆ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ" ಎಂದು ಹೇಳಿದ್ದಾರೆ.
"ಒಮ್ಮೆ ನಮ್ಮ ಪಕ್ಷದಲ್ಲಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಬಗ್ಗೆ ಒಂದು ಹೇಳಿಕೆ ನೀಡಲಾಗಿತ್ತು. ಆ ಸಮಯದಲ್ಲಿ ನಾನು ಆ ಹೇಳಿಕೆಯನ್ನು ವಿರೋಧಿಸಿದ್ದೇನೆ. ಡಾ.ಮನಮೋಹನ್ ಸಿಂಗ್ ನಮ್ಮ ಪ್ರಧಾನಿ ಎಂದು ನಾನು ಹೇಳಿದ್ದೆ ಮತ್ತು ಅವರ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು. ನಾನು, ನರಸಿಂಹ ರಾವ್, ಹೆಚ್ ಡಿ ದೇವೇಗೌಡ ಅಥವಾ ಯಾವುದೇ ಪ್ರಧಾನಮಂತ್ರಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿಲ್ಲ" ಎಂದಿದ್ದಾರೆ ರಾಜನಾಥ್ ಸಿಂಗ್.