ನವದೆಹಲಿ : ಸುಮಾರು ಐದು ವರ್ಷಗಳ ಕಾಲ ನೀತಿ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಜೀವ್ ಕುಮಾರ್ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ. ರಾಜೀವ್ ಕುಮಾರ್ ಅವರ ಜಾಗಕ್ಕೆ ಅರ್ಥಶಾಸ್ತ್ರಜ್ಞ ಸುಮನ್ ಕೆ ಬೆರಿ ಅವರು ನೇಮಕವಾಗಲಿದ್ದು, ಮೇ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಧಿಸೂಚನೆಯ ಪ್ರಕಾರ ಡಾ.ಸುಮನ್ ಕೆ ಬೆರಿ ಅವರನ್ನು 'ತಕ್ಷಣದಿಂದ ಜಾರಿಗೆ ಬರುವಂತೆ' ನೀತಿ ಆಯೋಗದ ಪೂರ್ಣ ಸಮಯದ ಸದಸ್ಯರಾಗಿ ನೇಮಕ ಮಾಡಿದೆ. ಸಂಪುಟದ ನೇಮಕಾತಿ ಸಮಿತಿಯು ಹೊರಡಿಸಿರುವ ಅಧಿಸೂಚನೆಯಲ್ಲಿ ರಾಜೀವ್ ಕುಮಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಏಪ್ರಿಲ್ 30ರಂದು ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಮೇ 1, 2022ರಿಂದ ಮುಂದಿನ ಆದೇಶಗಳವರೆಗೆ ಜಾರಿಗೆ ಬರುವಂತೆ ಡಾ.ಸುಮನ್ ಕೆ ಬೆರಿ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗುತ್ತದೆ. ಹಿಂದಿನ ಉಪಾಧ್ಯಕ್ಷರಿಗೆ ಅನ್ವಯಿಸುವ ಅದೇ ನಿಯಮಗಳು ಮತ್ತು ಷರತ್ತುಗಳ ಮೇಲೆ ಅವರನ್ನು ನೇಮಕ ಮಾಡಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಜೀವ್ ಕುಮಾರ್ ಅವರು ಆಗಸ್ಟ್ 2017ರಲ್ಲಿ ಸರ್ಕಾರದ ನೀತಿ ಆಯೋಗದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಬೋಧನಾ ನಿಯೋಜನೆಗೆ ಮರಳಲು ನಿರ್ಧರಿಸಿದ ಅರವಿಂದ್ ಪನಗಾರಿಯಾ ಅವರಿಂದ ಅಧಿಕಾರವನ್ನು ರಾಜೀವ್ ಕುಮಾರ್ ಅವರು ವಹಿಸಿಕೊಂಡಿದ್ದರು.
ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಬೆರಿ ಅವರು ಈ ಹಿಂದೆ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (NCAER) ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ, ಅಂಕಿಅಂಶ ಆಯೋಗ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ತಾಂತ್ರಿಕ ಸಮಿತಿಯ ಸದಸ್ಯರೂ ಆಗಿದ್ದರು. ಭಾರತದ ಆರ್ಥಿಕ ಸುಧಾರಣೆಗಳ ಸಮಯದಲ್ಲಿ ಬೆರಿ ಅವರು ವಿಶ್ವಬ್ಯಾಂಕ್‌ಗಾಗಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟು ಪೊಲೀಸರಿಗೆ ಶರಣಾದ ಮಾವೋವಾದಿ ಜೋಡಿ