ಚೆನ್ನೈ : 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸೂಪರ್ಸ್ಟಾರ್ ರಜಿನಿಕಾಂತ್ ತಮ್ಮ ನಿರ್ಧಾರವನ್ನು ಘೋಷಿಸದೇ ಮತ್ತೆ ನಿಗೂಢತೆ ಕಾಯ್ದುಕೊಂಡಿದ್ದಾರೆ. ಇಂದು ನಡೆದ ಕಾರ್ಯದರ್ಶಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎನ್ನಲಾಗಿತ್ತು. ಆದರೆ, ಸಭೆಯ ಬಳಿಕ ಮಾತನಾಡಿ ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇವೆ ಎಂದಿದ್ದಾರೆ.
ನನ್ನ ರಾಜಕೀಯ ಪ್ರವೇಶ ಕುರಿತು ಸದ್ಯದಲ್ಲೇ ಮಾಹಿತಿ ನೀಡಲಿದ್ದೇನೆ ಎಂದು ನಟ ರಜಿನಿಕಾಂತ್ ತಿಳಿಸಿದ್ದಾರೆ. ಇಂದು ನಡೆದ ಪಕ್ಷ ಕಾರ್ಯದರ್ಶಿಗಳ ಸಭೆ ಬಳಿಕ ಮಾತನಾಡಿದ ಅವರು, ರಾಜಕೀಯ ಪ್ರವೇಶ ಕುರಿತು ಮುಂದೆ ನಿರ್ಧಾರ ಮಾಡಲಿದ್ದೇನೆ ಎಂದಿದ್ದಾರೆ.
ಪಕ್ಷದ ಕಾರ್ಯದರ್ಶಿಗಳ ಅಭಿಮತ ಕೇಳಿದ್ದೇನೆ, ನನ್ನ ಪರವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ. ಪಕ್ಷದ ಕುರಿತ ನನ್ನ ಅಭಿಪ್ರಾಯವನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ. ಹೀಗಾಗಿ ನನ್ನ ರಾಜಕೀಯ ಪ್ರವೇಶ ಇಷ್ಟೆರಲ್ಲೇ ತಿಳಿಸಲಿದ್ದೇನೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ಕರುಣಾನಿಧಿ ಹಾಗೂ ಜಯಲಲಿತಾ ರಾಜಕಾರಣದ ಬಳಿಕ ರಜಿನಿಕಾಂತ್ ರಾಜಕೀಯ ಪ್ರವೇಶ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಳೆದ 2017ರ ಡಿಸೆಂಬರ್ನಲ್ಲಿ ರಜಿನಿ ರಾಜಕೀಯ ಪ್ರವೇಶ ಕುರಿತು ಸುಳಿವು ಬಿಟ್ಟುಕೊಟ್ಟಿದ್ದರು. ಆದರೆ, ಅಲ್ಲಿಂದ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೆ, ಚುನಾವಣೆಗೂ ಸ್ಪರ್ಧಿಸದೇ ಕುತೂಹಲ ಮೂಡಿಸಿತ್ತು.
2021ರ ಚುನಾವಣೆ ಸ್ಪರ್ಧೆ ಕುರಿತು ನಿರ್ಧಾರ ಪ್ರಕಟಿಸಲೆಂದೇ ಇಂದು ಮಕ್ಕಳ್ ಮಂದ್ರಂ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆ ಕರೆದಿದ್ದರು. ಈಗ ಸಭೆ ಅಂತ್ಯಗೊಂಡ ಬಳಿಕ ಮಾತನಾಡಿ ಮತ್ತೊಮ್ಮೆ ಅಡ್ಡಗೋಡೆಯ ಮೇಲೆ ದೀಪವಿಟ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಇದನ್ನೂ ಓದಿ: ರಾಜಕೀಯ ಪ್ರವೇಶ ಕುರಿತು ರಜಿನಿ ಭವಿಷ್ಯ ತೀರ್ಮಾನ.. ಕಾರ್ಯದರ್ಶಿಗಳ ಸಭೆ ನಡೆಸುತ್ತಿರುವ ತಲೈವಾ