ಬನ್ಸ್ವಾರ (ರಾಜಸ್ಥಾನ): ವಿಷಾಹಾರ ಸೇವಿಸಿ 125 ಜನರು ಅಸ್ವಸ್ಥಗೊಂಡು ರಾಜಸ್ಥಾನದ ಬನ್ಸ್ವಾರ ಜಿಲ್ಲೆಯ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದಾರೆ. ಜಿಲ್ಲೆಯ ನವಗಾಂವ ಗ್ರಾಮ ಪಂಚಾಯಿತಿಯ ಪನಿಯಾಲ ಗ್ರಾಮದಲ್ಲಿ ಘಟನೆ ನಡೆದಿದೆ.
ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ನೀಡಿದ ಸಿಹಿ ತಿಂಡಿ ತಿಂದ ಬಳಿಕ ಫುಡ್ ಪಾಯ್ಸನ್ ಆಗಿದ್ದು, ನಂತರ ಎಲ್ಲರೂ ಅಸ್ವಸ್ಥರಾಗಿದ್ದರು. ಮೊದಲ ರೋಗಿಯನ್ನು ಶನಿವಾರ ಸಂಜೆ 7 ಗಂಟೆಗೆ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ರಾತ್ರಿ 11 ರ ಹೊತ್ತಿಗೆ ಸುಮಾರು 125 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಕಾಶ್ ಚಂದ್ ಶರ್ಮಾ, ಎಸ್ಪಿ ರಾಜೇಶ್ ಕುಮಾರ್ ಮೀನಾ ಮತ್ತು ಅಪರ ಜಿಲ್ಲಾಧಿಕಾರಿ ಡಾ.ವಿಕಾಸ್ ಬಮಾನಿಯಾ ಗ್ರಾಮಕ್ಕೆ ಭೇಟಿ ನೀಡಿ, ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು.
ಇದನ್ನೂ ಓದಿ: ವಿಷಾಹಾರ ಸೇವಿಸಿ ಇಂದಿರಾಗಾಂಧಿ ವಸತಿ ಶಾಲೆಯ 50 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಜಿಲ್ಲಾಧಿಕಾರಿ ಪ್ರಕಾಶ್ ಚಂದ್ ಶರ್ಮಾ ಮಾತನಾಡಿ, ಕಾರ್ಯಕ್ರಮದ ನಂತರ ಗ್ರಾಮದಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು. ಸುಮಾರು 200 ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಿಹಿ ತಿಂಡಿಯನ್ನು ನೀಡಲಾಗಿದೆ. ಇದನ್ನು ತಿಂದ ನಂತರ ಜನರ ಆರೋಗ್ಯ ಹದಗೆಡಲು ಆರಂಭಿಸಿದೆ. ಮಕ್ಕಳು ಸೇರಿದಂತೆ ಸುಮಾರು 125 ಮಂದಿ ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ನೀಡಿದರು.