ಭರತಪುರ( ರಾಜಸ್ಥಾನ): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಚಿತ ಧಾನ್ಯ ವಿತರಣೆ ಯೋಜನೆ ಮುಂದಿನ 5 ವರ್ಷಗಳ ಕಾಲ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು. ಇಂದು ರಾಜಸ್ಥಾನದ ಭರತಪುರದಲ್ಲಿ ನಡೆದ 'ವಿಜಯ್ ಸಂಕಲ್ಪ' ಸಾರ್ವಜನಿಕ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.
ಕೊರೊನಾ ಸಮಯದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಉಚಿತ ಧಾನ್ಯ ವಿತರಣೆ ಯೋಜನೆ ಇದೇ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. ಆದರೆ, ಪ್ರತಿಯೊಬ್ಬ ಬಡವನ ಮನೆಯಲ್ಲಿ ಒಲೆ ಉರಿಬೇಕು, ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂಬ ದೃಷ್ಟಿಯಿಂದ ಈ ಉಚಿತ ಧಾನ್ಯ ವಿತರಣೆ ಯೋಜನೆಯನ್ನು ಮುಂದಿನ 5 ವರ್ಷಗಳ ಕಾಲ ವಿಸ್ತರಿಸಲಾಗಿದೆ ಎಂದು ಹೇಳಿದರು.
ಈ ವಿಚಾರವಾಗಿ ನನ್ನ ವಿರುದ್ಧ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ. ಆದರೆ, ಬಡವರ ಹೊಟ್ಟೆಪಾಡಿಗಾಗಿ ನಾನು ಜೈಲಿಗೆ ಹೋಗಲೂ ಸಿದ್ದ ಎಂದು ಇದೇ ವೇಳೆ ಹೇಳಿದರು.
ಪೆಟ್ರೋಲ್ನಿಂದ ಹಣ ಲೂಟಿ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ನಿಂದ ಹಣ ಲೂಟಿ ಮಾಡುವ ಮೂಲಕ ತನ್ನ ನಾಯಕರ ಬೊಕ್ಕಸ ತುಂಬಿಸುತ್ತಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ಥಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬಾ ದುಬಾರಿಯಾಗಿದೆ. ಪರಭಕ್ಷಕ ಸರಕಾರದಿಂದ ಇಲ್ಲಿ ಪೆಟ್ರೋಲ್ ದುಬಾರಿಯಾಗಿದೆ. ಬೆಲೆ ಇಳಿಸಲು ಇಲ್ಲಿನ ಸರ್ಕಾರ ಸಿದ್ಧವಿಲ್ಲ. ನೆರೆಯ ರಾಜ್ಯಗಳಾದ ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97 ರೂ., ಇದ್ದರೆ ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 109ರೂ ಇದೆ. ರಾಜಸ್ಥಾನದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಪೆಟ್ರೋಲ್ ಬೆಲೆಯನ್ನು ಪರಿಶೀಲಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಸಾಧ್ಯವಾದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ವಿರುದ್ದ ವಾಗ್ದಾಳಿ: ರಾಜಸ್ಥಾನವನ್ನು ಭ್ರಷ್ಟಾಚಾರದಲ್ಲಿ ಮುಳುಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಜೈಪುರದ ಲಾಕರ್‌ನಿಂದ ಕಪ್ಪು ಹಣ ಮತ್ತು ಚಿನ್ನ ಹೊರಬರುತ್ತಿದೆ. ಇದು ಆಲೂಗಡ್ಡೆಯಿಂದ ತಯಾರಾದ ಚಿನ್ನವಲ್ಲ, ಇದು ಸಾರ್ವಜನಿಕರಿಂದ ಲೂಟಿಯಾದ ನಿಜವಾದ ಚಿನ್ನವಾಗಿದೆ. ಇದು ಪೇಪರ್ ಸೋರಿಕೆ ಹಗರಣ, ನೀರು ಸಂಬಂಧಿತ ಹಗರಣ, ಮಧ್ಯಾಹ್ನದ ಊಟ ಮತ್ತು ವರ್ಗಾವಣೆ ಪೋಸ್ಟಿಂಗ್ ಮೂಲಕ ಗಳಿಸಿದ ಹಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನ ಕರಾಳ ಕೃತ್ಯಗಳ ಕೆಂಪು ಡೈರಿಯ ಪುಟಗಳು ತೆರೆಯಲಾರಂಭಿಸಿವೆ. ಸರ್ಕಾರ ಹೇಗೆ ರಾಜ್ಯವನ್ನು ಗಣಿ ಮಾಫಿಯಾಕ್ಕೆ ಒಪ್ಪಿಸಿತು ಎಂದು ಡೈರಿಯ ಪುಟಗಳಲ್ಲಿ ಬರೆಯಲಾಗಿದೆ ಎಂದು ಹೇಳಿದ ಅವರು ದೀಪಾವಳಿ ಹಬ್ಬದಂದು ಮಹಿಳೆಯರು ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸುವ ರೀತಿಯಲ್ಲೇ ರಾಜಸ್ಥಾನದ ಮೂಲೆ ಮೂಲೆಯಿಂದಲೂ ಕಾಂಗ್ರೆಸ್ ಅನ್ನು ಕ್ಲೀನ್ ಮಾಡಬೇಕು ಆಗ ಮಾತ್ರ ಒಳ್ಳೆಯ ಹಬ್ಬ ಆಚರಿಸಲಾಗುತ್ತದೆ ಎಂದು ಹೇಳಿದರು.
ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ, ಸರ್ಕಾರ ರಚನೆಯಾದ ನಂತರ ಪ್ರಾಣಿಗಳಿಗೆ ಉಚಿತ ಲಸಿಕೆ ನೀಡುತ್ತೇವೆ ಮತ್ತು ಇಡೀ ಲಸಿಕೆ ಯೋಜನೆಯನ್ನು ಜಾರಿಗೊಳಿಸುತ್ತೇವೆ. ರಾಜ್ಯ ಸರಕಾರ ರಚನೆಯಾದ ನಂತರ ರಾಜ್ಯ ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು. ಜತೆಗೆ ರೈತರು ಪ್ರಧಾನ ಮಂತ್ರಿ ನಿಧಿಯಿಂದ 12,000 ರೂ.ಗಳನ್ನು ನೀಡಲಾಗುತ್ತದೆ ಎಂದು ಇದೇ ವೇಳೆ ಅಭಯ ನೀಡಿದರು.
ಇದನ್ನೂ ಓದಿ: ನೆಹರೂ ಪತ್ನಿ ಹಣೆಪಟ್ಟಿ ಕಟ್ಟಿಕೊಂಡಿದ್ದ ಮಹಿಳೆ ನಿಧನ: ಯಾರು ಈ ಬುಧ್ನಿ ಮಾಂಜಿಯಾನ್?