ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಚಿಂಗ್ ಕೇಂದ್ರವಾದ ಕೋಟಾ ಜಿಲ್ಲೆಯಲ್ಲಿ ಮತ್ತೊಮ್ಮ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳ ಮೂಲದ 19 ವರ್ಷದ ಫೌರಿದ್ ಹುಸೇನ್ ಸಾವಿಗೆ ಶರಣಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಇದರೊಂದಿಗೆ ಕೋಟಾದಲ್ಲಿ ಒಂದು ತಿಂಗಳ ನಂತರ ಮತ್ತೆ ವಿದ್ಯಾರ್ಥಿಯ ಸಾವಿನ ಘಟನೆ ವರದಿಯಾಗಿದೆ.
ಐಐಟಿ, ನೀಟ್ ಸೇರಿದಂತೆ ಹಲವು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೋಚಿಂಗ್ಗೆ ಕೋಟಾ ಹೆಸರು ಪಡೆದಿದೆ. ಇದೀಗ ಕಳೆದ ಕೆಲವು ತಿಂಗಳಿಂದ ಆಕಾಂಕ್ಷಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ದೀಪಾವಳಿ ಹಬ್ಬದ ರಜೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಹೋಗಿ ವಾಪಸ್ ಬಂದ್ಮೇಲೆ ಮತ್ತೆ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಸೋಮವಾರ ಈ ವಿದ್ಯಾರ್ಥಿಯ ಪ್ರಕರಣ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ ಸಿಯುರಾ ನಲ್ಹಾಟಿ ಜಿಲ್ಲೆಯ ಬಿರ್ಭುಮ್ ನಿವಾಸಿಯಾದ ಫೌರಿದ್ ಹುಸೇನ್, ಒಂದು ವರ್ಷದಿಂದ ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ಗೆ ತಯಾರಿ ನಡೆಸುತ್ತಿದ್ದ. ಇಲ್ಲಿನ ವಕ್ಫ್ ನಗರ ಪ್ರದೇಶದ ಮನೆಯೊಂದರಲ್ಲಿ ಬಾಡಿಗೆ ಇದ್ದ. ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದಾದಾಬರಿ ಪೊಲೀಸ್ ಠಾಣಾಧಿಕಾರಿ ರಾಜೇಶ್ ಪಾಠಕ್ ತಿಳಿಸಿದ್ದಾರೆ.
ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಹುಸೇನ್ ಅವರನ್ನು ಇತರ ವಿದ್ಯಾರ್ಥಿಗಳು ಗಮನಿಸಿದ್ದರು. ಈ ವಿದ್ಯಾರ್ಥಿಗಳು ಸಹ ಅದೇ ಮನೆಯ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದಾರೆ. ಆದರೆ, 7 ಗಂಟೆ ಸುಮಾರಿಗೆ ಕರೆ ಮಾಡಿದಾಗ ಹುಸೇನ್ ಕೊಠಡಿಯ ಬಾಗಿಲು ತೆರೆದಿಲ್ಲ. ಬಹಳ ಹೊತ್ತು ಬಾಗಿಲು ತಟ್ಟಿದರೂ ಒಳಗಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಆ ವಿದ್ಯಾರ್ಥಿಗಳು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಆಗ ಮಾಲೀಕರು ಕೊಠಡಿಯೊಳಗೆ ಪ್ರವೇಶಿಸಿದಾಗ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಆತ ಪತ್ತೆಯಾಗಿದ್ದಾನೆ ಎಂದು ಅವರು ವಿವರಿಸಿದರು.
ಅಂತೆಯೇ, ವಿದ್ಯಾರ್ಥಿ ಹುಸೇನ್ನನ್ನು ಹತ್ತಿರದ ಆಸ್ಪತ್ರೆಗೆ ಮನೆಯ ಮಾಲೀಕರು ಸಾಗಿದ್ದಾರೆ. ಆದರೆ, ಅಷ್ಟರಲ್ಲಿ ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಬಳಿಕ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಂಬಿಎಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪಶ್ಚಿಮ ಬಂಗಾಳದಿಂದ ಕುಟುಂಬಸ್ಥರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಸಿಐ ಪಾಠಕ್ ಮಾಹಿತಿ ನೀಡಿದರು.
ಇದನ್ನೂ ಓದಿ: Student suicide: ಕೋಟಾದಲ್ಲಿ ಮತ್ತೊಬ್ಬ ಐಐಟಿ ಆಕಾಂಕ್ಷಿ ಆತ್ಮಹತ್ಯೆ: 8 ತಿಂಗಳಲ್ಲಿ 22ನೇ ಸಾವು ಪ್ರಕರಣ!