ನವದೆಹಲಿ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಹಾಲಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ನಾಯಕರನ್ನು ಒಗ್ಗೂಡಿಸಿ, 2024ರಲ್ಲಿ ಗುಡ್ಡಗಾಡು ರಾಜ್ಯದ ಎಲ್ಲ ಐದು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ರಣತಂತ್ರ ರೂಪಿಸುವ ಸಾಧ್ಯತೆ ಇದೆ. ಅವರು ಜುಲೈ 13ರಂದು ಪಕ್ಷದ ಕಾರ್ಯತಂತ್ರಗಳನ್ನು ಪರಿಶೀಲಿಸಲಿದ್ದಾರೆ. ಈ ಮಧ್ಯೆಯೇ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ಬಗ್ಗೆ ಕೂಗು ಕೂಡಾ ಕೇಳಿ ಬರುತ್ತಿದೆ.
ಜುಲೈ 13ಕ್ಕೆ ಉತ್ತರಾಖಂಡ ನಾಯಕರ ಸಭೆ: ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಸಿದ್ಧತೆ ಕುರಿತು ಚರ್ಚಿಸಲು ಖರ್ಗೆ ಅವರು ಜುಲೈ 13 ರಂದು ಉತ್ತರಾಖಂಡ ನಾಯಕರ ಸಭೆ ಕರೆದಿದ್ದಾರೆ ಎಂದು ಉತ್ತರಾಖಂಡದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ರಾಜೇಶ್ ಧರ್ಮಾನಿ 'ಈಟಿವಿ ಭಾರತ'ಗೆ ತಿಳಿಸಿದ್ದಾರೆ. ಧರ್ಮಾನಿ ಪ್ರಕಾರ, ''ಕಾಂಗ್ರೆಸ್‌ನ ಗುರಿ ರಾಜ್ಯದ ಎಲ್ಲ ಐದು ಲೋಕಸಭಾ ಸ್ಥಾನಗಳನ್ನು ಬಿಜೆಪಿಯಿಂದ ಕಸಿದುಕೊಳ್ಳುವುದಾಗಿದೆ ಮತ್ತು ಕೇಸರಿ ಪಕ್ಷದ ವಿಭಜಕ ಅಜೆಂಡಾವನ್ನು ಎದುರಿಸುವುದೇ ಆಗಿದೆ'' ಎಂದಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ವಿಚಾರ: ''ಬಿಜೆಪಿಯು, ಮತದಾರರನ್ನು ಒಗ್ಗೂಡಿಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಷಯವನ್ನು ಬಳಸುತ್ತಿದೆ. ಜನರನ್ನು ವಿಭಜಿಸಲು ಸುಳ್ಳು ಪ್ರಚಾರ ನಡೆಸುತ್ತಿದೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಯುಸಿಸಿ ನಿರ್ಣಯವನ್ನು ಅಂಗೀಕರಿಸಲು ಯೋಜಿಸುತ್ತಿದ್ದಾರೆ. ಆದರೆ, ಇದು ಕೇಂದ್ರದ ವಿಷಯವಾಗಿದೆ ಮತ್ತು ಸಂಸತ್ತಿನ ಅನುಮೋದನೆ ಅಗತ್ಯವಿದೆ. ಸಂಕೀರ್ಣ ಶಾಸನ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳದ ಸಾಮಾನ್ಯ ಜನರನ್ನು ಅವರು ದಾರಿ ತಪ್ಪಿಸಲು ಮುಂದಾಗಿದ್ದಾರೆ. ಈ ವಿಭಜಕ ಅಜೆಂಡಾವನ್ನು ಕೈಬಿಡಲು, ನಾವು ಒಗ್ಗಟ್ಟಿನಿಂದ ಹೇಗೆ ಹೋರಾಡಬಹುದು ಎಂದು ನೋಡಬೇಕಿದೆ'' ಎಂದು ಧರ್ಮಾನಿ ಹೇಳಿದರು.
ಎಐಸಿಸಿ ಕಾರ್ಯದರ್ಶಿ ರಾಜೇಶ್ ಧರ್ಮಾನಿ ಮಾತನಾಡಿ, ''ಸಂಸದೀಯ ಚುನಾವಣಾ ಗೆಲ್ಲಲು ರಾಜ್ಯ ಘಟಕವು ಒಗ್ಗೂಡುವ ಅಗತ್ಯವಿದೆ. ಜೊತೆಗೆ ಸಂಘಟನಾ ಕೊರತೆಯನ್ನು ತುಂಬುವ ಅಗತ್ಯವಿದೆ. ಹಿರಿಯ ನಾಯಕರಿಗೆ ತಲಾ ಒಂದು ಲೋಕಸಭಾ ಸ್ಥಾನದ ಉಸ್ತುವಾರಿ ನೀಡಬಹುದು ಎಂಬ ಪ್ರಸ್ತಾವನೆ ಇದೆ. ಜೊತೆಗೆ ಹಿರಿಯ ನಾಯಕರ ನಡುವೆ ಸಮನ್ವಯತೆ ಇರುವಂತೆ ನೋಡಿಕೊಳ್ಳಬೇಕು. ರಾಜ್ಯ ಘಟಕವು ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬಲು ಪಕ್ಷದ ಪ್ರಮುಖ ಸ್ಥಾನಗಳನ್ನು ನೀಡಬೇಕಾಗಿದೆ'' ಎಂದು ತಿಳಿಸಿದರು.
ಕಾಂಗ್ರೆಸ್‌ನ ಆಂತರಿಕ ಕಲಹ ಶಮನ: ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷವು ಸೋತ ನಂತರ, ರಾಜ್ಯ ಘಟಕದ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ನಂತರ, ಆಂತರಿಕ ಕಲಹವು ಚುನಾವಣಾ ಸೋಲಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಗುರುತಿಸಲಾಗಿದೆ. ಆಗ ಉತ್ತರಾಖಂಡ ಘಟಕದಲ್ಲಿ ಭಿನ್ನಮತ ನಿಯಂತ್ರಿಸಲು ರಾಹುಲ್ ಹೊಸ ತಂಡವನ್ನು ನಿಯೋಜಿಸಿದ್ದರು. ರಾಜ್ಯದಲ್ಲಿ ಜಾತಿ ಸಮೀಕರಣಗಳನ್ನು ಸಮತೋಲನಗೊಳಿಸಲು ಕರಣ್ ಮಹಾರಾ ಅವರು ರಾಜ್ಯ ಘಟಕದ ಮುಖ್ಯಸ್ಥರಾಗಿ, ಯಶಪಾಲ್ ಆರ್ಯ ಸಿಎಲ್‌ಪಿ ನಾಯಕರಾಗಿ ಮತ್ತು ಭುವನ್ ಕಾಪ್ರಿ ಉಪ ಸಿಎಲ್‌ಪಿ ನಾಯಕರಾದರು.
ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಕಿಡಿ: ''ಮಳೆ ಹರಿದ್ವಾರದಲ್ಲಿ ಅವಾಂತರ ಸೃಷ್ಟಿಸಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ರೋಗಗಳ ಭೀತಿ ಎದುರಾಗಿದೆ. ಆದರೆ, ಸರ್ಕಾರ ಏನೂ ಮಾಡುತ್ತಿಲ್ಲ. ನಮ್ಮ ಸರ್ಕಾರವು ಗಂಗಾ ನದಿಗೆ ಅಣೆಕಟ್ಟನ್ನು ನಿರ್ಮಿಸಿದೆ. ಆದರೆ, ಅದು ಹಾನಿಗೊಳಗಾಗಿದೆ, ಅದನ್ನು ಸರಿಪಡಿಸಲಾಗಿಲ್ಲ. ಬೆಲೆ ಏರಿಕೆಯು ಗುಡ್ಡಗಾಡು ರಾಜ್ಯದ ಜನರ ಮೇಲೆ ಪರಿಣಾಮ ಬೀರುವ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ'' ಎಂದು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಕಿಡಿಕಾರಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣ: ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ ಪೂರ್ಣೇಶ್ ಮೋದಿ