ನವದೆಹಲಿ: ಅಸ್ಸೋಂನ ತಿನ್ಸುಕಿಯಾದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್ನ ಸಂಸ್ಕರಣಾ ಘಟಕದ ಕಾರ್ಮಿಕರನ್ನು ಇಂದು ರಾಹುಲ್ ಗಾಂಧಿ ಭೇಟಿ ಮಾಡಲಿದ್ದಾರೆ. ನಂತರ ಅವರು ಎರಡು ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಈ ಎರಡೂ ಸಭೆಗಳು ಕ್ರಮವಾಗಿ ಮಧ್ಯಾಹ್ನ1 ಗಂಟೆ ಮತ್ತು 2:30 ಕ್ಕೆ ನಡೆಯಲಿವೆ.
ಸದ್ಯ 2 ದಿನಗಳ ಅಸ್ಸೋಂ ರಾಜ್ಯಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ಸಂಜೆ 4:45 ಕ್ಕೆ ಅಸ್ಸೋಂ ಚುನಾವಣೆಯ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಪ್ರದೇಶ ಕಾಂಗ್ರೆಸ್ ಕಮಿಟಿ ಆಫೀಸ್ನಲ್ಲಿ ಬಿಡುಗಡೆ ಮಾಡಲಿದ್ದಾರೆ.
ಕಾಂಗ್ರೆಸ್ ವಕ್ತಾರ, ಎಐಸಿಸಿ ಅಸ್ಸೋಂ ಚುನಾವಣೆಗಳ ಮಾಧ್ಯಮ ಉಸ್ತುವಾರಿ ಗೌರವ್ ವಲ್ಲಭ್ ಈ ಕುರಿತು ಮಾತನಾಡಿ, ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳಾದ 'ಐದು ಗ್ಯಾರಂಟಿ'ಗಳನ್ನು ನಾವು ಅಸ್ಸೋಂ ಜನತೆಯ ಮುಂದಿಡಲಿದ್ದೇವೆ. ಅಸ್ಸೋಂನಲ್ಲಿ ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡುತ್ತಿದ್ದೇವೆ ಎಂದು ಅವರು ಉಲ್ಲೇಖಿಸಿದ್ದಾರೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಚಹಾ ತೋಟಗಳ ಕಾರ್ಮಿಕರಿಗೆ 365 ರೂ. ದಿನಗೂಲಿ, 200 ಯೂನಿಟ್ ಉಚಿತ ವಿದ್ಯುತ್ ಮತ್ತು ಗೃಹಿಣಿಯರಿಗೆ ತಿಂಗಳಿಗೆ 2000 ರೂ. ಗೌರವಧನ ಸೇರಿದಂತೆ ಮತ್ತಿತರ ಜನಾಕರ್ಷಕ ಅಂಶಗಳನ್ನು ಸೇರಿಸಲಾಗಿದೆ.
ಅಸ್ಸೋಂನಲ್ಲಿ 126 ಸ್ಥಾನಗಳಿಗೆ ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ ಮೂರು ಹಂತಗಳಲ್ಲಿ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.