ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ಇಂದು ಮಧ್ಯಾಹ್ನ 1 ಗಂಟೆಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಲಿದ್ದಾರೆ. 2019 ರ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸೂರತ್ ಕೋರ್ಟ್‌ನಿಂದ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಹುಲ್ ಕೇರಳದ ವಯನಾಡ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದರು. ಇದೀಗ, 2 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿರುವ ಕಾರಣ ನಿಯಮದಂತೆ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನ (ಮಾರ್ಚ್ 24 ರಂದು) ಅನರ್ಹಗೊಳಿಸಿ ಆದೇಶಿಸಲಾಗಿದೆ. ರಾಹುಲ್ ಎಂಪಿ ಸ್ಥಾನಮಾನವನ್ನು ಕಳೆದುಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ನೀಡಿದೆ. ಏಕೆಂದರೆ, ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು.
ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ ನಂತರ ಮೊದಲ ಬಾರಿಗೆ ಗುರುವಾರ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ರಾಗಾ, "ಭಾರತದ ಧ್ವನಿಗಾಗಿ ನಾನು ಹೋರಾಡುತ್ತಿದ್ದೇನೆ. ಇದಕ್ಕಾಗಿ "ಯಾವುದೇ ಬೆಲೆ ತೆರಲು" ಸಿದ್ಧ ಎಂದಿದ್ದರು.
ಚುನಾವಣೆ ಘೋಷಣೆ ಸಾಧ್ಯತೆ: ರಾಹುಲ್ ಅನರ್ಹಗೊಂಡ ಪರಿಣಾಮ ವಯನಾಡ್ ಎಂಪಿ ಸ್ಥಾನ ಖಾಲಿಯಾಗಿದೆ. ಹೀಗಾಗಿ,, ಚುನಾವಣಾ ಆಯೋಗವು ವಯನಾಡ್‌ಗೆ ಹೊಸದಾಗಿ ಉಪ ಚುನಾವಣೆ ಘೋಷಣೆ ಮಾಡಬಹುದು. ಅಲ್ಲದೇ, ಅನರ್ಹತೆಯ ತೀರ್ಪನ್ನು ಉನ್ನತ ನ್ಯಾಯಾಲಯವು ವಜಾ ಮಾಡದಿದ್ದರೆ ಮುಂದಿನ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಭಾರತದ ರಾಜಕೀಯದಲ್ಲಿ ತನ್ನ ನೆಲೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಈ ವಿಚಾರ ಮತ್ತಷ್ಟು ಆಘಾತ ನೀಡಿದೆ.
ಇದನ್ನೂ ಓದಿ: 'ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ': ರಾಹುಲ್ ಗಾಂಧಿ ಅನರ್ಹತೆ ಖಂಡಿಸಿದ ಪ್ರತಿಪಕ್ಷದ ನಾಯಕರು
ಏನಿದು ಪ್ರಕರಣ? : 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕರ್ನಾಟಕದ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನೀರವ್ ಮೋದಿಯಾಗಿರಲಿ, ಲಲಿತ್ ಮೋದಿಯಾಗಿರಲಿ ಅಥವಾ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಕಳ್ಳರ ಸರ್ ನೇಮ್ ಮೋದಿಯೇ ಆಗಿರುವುದೇಕೆ? ಎಂದು ಪ್ರಶ್ನಿಸಿದ್ದರು. ಈ ಕುರಿತು ಗುಜರಾತ್‌ನ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣ: ಏ.12 ರಂದು ಪಾಟ್ನಾ ಕೋರ್ಟ್ಗೆ ಹಾಜರಾಗಲಿರುವ ರಾಹುಲ್ ಗಾಂಧಿ
ರಾಹುಲ್ ಪರ ನಿಂತ ವಿವಿಧ ಪಕ್ಷಗಳ ನಾಯಕರು: ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡ ರಾಹುಲ್ ಪರವಾಗಿ ದೇಶದ ವಿವಿಧ ಪಕ್ಷಗಳ ನಾಯಕರು ಬೆಂಬಲಕ್ಕೆ ನಿಂತಿದ್ದಾರೆ. ಕರ್ನಾಟಕದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ರಾಹುಲ್ ಅನರ್ಹತೆ ಆದೇಶವನ್ನು ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.