ಹರಿದ್ವಾರ(ಉತ್ತರಾಖಂಡ): ಕೇಂದ್ರ ಸರ್ಕಾರ ಸಿಬಿಐ, ಇಡಿ ಸಂಸ್ಥೆಗಳನ್ನು ಬಳಸಿಕೊಂಡು ನಮ್ಮನ್ನು ಎದುರಿಸಲಾಗಲ್ಲ. ಕೇಂದ್ರದ ಒತ್ತಡ ತಂತ್ರಕ್ಕೆ ನಾನು ತಲೆಬಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಇಡಿ, ಸಿಬಿಐ ಅಧಿಕಾರಿಗಳನ್ನು ಬಳಸಿಕೊಂಡು ನಮ್ಮ ಮೇಲೆ ಸವಾರಿ ಮಾಡಲಾಗಲ್ಲ. ಸಾಂವಿಧಾನಿಕ ಸಂಸ್ಥೆಗಳಿಂದ ಒತ್ತಡ ಹೇರುವ ಕೇಂದ್ರದ ತಂತ್ರ ಫಲಿಸಲ್ಲ. ಈ ಬಗ್ಗೆ ನಾನು ಎಂದಿಗೂ ಕುಗ್ಗುವ ವ್ಯಕ್ತಿಯಲ್ಲ ಎಂದು ಗುಡುಗಿದ್ದಾರೆ.
ಸಂಸತ್ ಕಲಾಪದಲ್ಲಿ ಭಾಗಿಯಾಗದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಹೇಗೆ ಉತ್ತರಿಸಲಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ 'ರೈತರ ಸಂಕಷ್ಟದ ಬಗ್ಗೆ ಕೇಳಿಸಿಕೊಳ್ಳದ ಪ್ರಧಾನಿ ಮಾತನ್ನು ನಾನೇಕೆ ಕೇಳಿಸಿಕೊಳ್ಳಲಿ' ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಜಿಎಸ್ಟಿ ಜಾರಿಯಾದ ಬಳಿಕ ದೇಶದ ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡರು. ಜಿಎಸ್ಟಿ ಅವರ ಜೀವನವನ್ನು ಹಾಳು ಮಾಡಿತು. ಬ್ಲ್ಯಾಕ್ ಮನಿ ವೈಟ್ ಆಗಿ ಬಿಜೆಪಿಯ ಬೊಕ್ಕಸಕ್ಕೆ ಸೇರಿಕೊಂಡಿತು. ಕೋವಿಡ್ ಸಾಂಕ್ರಾಮಿಕದ ವೇಳೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ವ್ಯವಸ್ಥೆ ಹೆಚ್ಚಿಸುವ ಬದಲು ಪ್ರಧಾನಿ ಎಲ್ಲರಿಗೂ ತಟ್ಟೆ ಬಾರಿಸಲು ಹೇಳಿದರು ಎಂದು ವಾಗ್ದಾಳಿ ನಡೆಸಿದರು.
ಕಳೆದ 70 ವರ್ಷಗಳಲ್ಲಿ ದೇಶ ಅಭಿವೃದ್ಧಿ ಸಾಧಿಸಿಲ್ಲ ಎಂದು ಪ್ರಧಾನಮಂತ್ರಿ ಹೇಳುತ್ತಾರೆ. ಇದರರ್ಥ ಈ ದೇಶದ ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರು ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮ್ಯಾಜಿಕ್ನಂತೆ ಎಲ್ಲವನ್ನೂ ಪಡೆದುಕೊಂಡರು ಎಂದು ರಾಹುಲ್ ಛೇಡಿಸಿದ್ದಾರೆ.
ಓದಿ: ಮಂಡ್ಯದಲ್ಲಿ ಘೋಷಣೆ ಕೂಗಿದ ಯುವತಿಗೆ ಮುಸ್ಲಿಂ ರಾಷ್ಟ್ರೀಯ ಮಂಚ್ ಬೆಂಬಲ