ನವದೆಹಲಿ: ಪೆಗಾಸಸ್ ಫೋನ್ ಹ್ಯಾಕಿಂಗ್ ಪಟ್ಟಿಯಲ್ಲಿ 300ಕ್ಕೂ ಹೆಚ್ಚು ಭಾರತೀಯರಿದ್ದಾರೆ ಎಂದು ವೈರ್ ಸುದ್ದಿ ಸಂಸ್ಥೆ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಇದು ದೇಶದಲ್ಲಿ ಭಾರಿ ಚರ್ಚೆಗೆ ವೇದಿಕೆ ಕಲ್ಪಿಸಿದ ಬೆನ್ನಲ್ಲೇ ಈ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಮಾಜಿ ಸಿಇಸಿ ಅಶೋಕ್ ಲವಾಸಾ ಸೇರಿದ್ದಾರೆ. ಅವರ ಫೋನ್ ಸಂಖ್ಯೆಗಳು ಹ್ಯಾಕಿಂಗ್ ಆಗಿರುವ ಪಟ್ಟಿಯಲ್ಲಿವೆ ಎಂದು ವೈರ್ ಸುದ್ದಿ ಸಂಸ್ಥೆ ಮತ್ತೊಂದು ವರದಿಯಲ್ಲಿ ಬಹಿರಂಗಪಡಿಸಿದೆ.
ಈ ಪಟ್ಟಿಯಲ್ಲಿ ರಾಹುಲ್ ಗಾಂಧಿ ಬಳಸುವ ಕನಿಷ್ಠ ಎರಡು ಫೋನ್ ಸಂಖ್ಯೆಗಳಿವೆ. ಇದರಲ್ಲಿ ರಾಹುಲ್‌ಗೆ ಹತ್ತಿರವಿರುವ ಐದು ಜನರ ದೂರವಾಣಿ ಸಂಖ್ಯೆಗಳೂ ಸೇರಿವೆ. ಆದರೆ 2018-19ರಲ್ಲಿ ರಾಹುಲ್ ಬಳಸಿದ ಫೋನ್‌ಗಳು ಅವರ ಬಳಿ ಇಲ್ಲ. ಫೋರೆನ್ಸಿಕ್ ತಜ್ಞರು ಫೋನ್‌ಗಳನ್ನು ವಿಶ್ಲೇಷಿಸಿಲ್ಲ. ಆಗ ರಾಹುಲ್ ಅವರ ಫೋನ್ ಹ್ಯಾಕ್ ಆಗಿದೆಯೇ? ಅಥವಾ ಇಲ್ಲವೇ? ಸ್ಪಷ್ಟವಾಗಿಲ್ಲ ವರದಿಯಲ್ಲಿ ಹೇಳಿದೆ. ಆದರೆ ಕನಿಷ್ಠ 9 ಸಂಖ್ಯೆಗಳು ಪಟ್ಟಿಯಲ್ಲಿವೆ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ: 45ಕ್ಕೂ ಹೆಚ್ಚು ದೇಶಗಳಿಂದ ಪೆಗಾಸಸ್ ಬಳಕೆ: ಭಾರತ ಮಾತ್ರ ಟಾರ್ಗೆಟ್ ಯಾಕೆ? ರವಿಶಂಕರ್ ಪ್ರಸಾದ್
ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಅವರ ಫೋನ್ ಅನ್ನು ಪೆಗಾಸಸ್ ಹ್ಯಾಕ್ ಮಾಡಿದೆ ಎಂದು ಆರೋಪಿಸಿ ಸಂಸ್ಥೆ ಮತ್ತೊಂದು ಲೇಖನ ಬರೆದಿದೆ. ವಿಧಿವಿಜ್ಞಾನ ತಜ್ಞರು ಪಿಕೆ ಅವರ ಫೋನ್ ಪರಿಶೀಲಿಸಿದಾಗ ಅದನ್ನು ಒಮ್ಮೆಯಾದರೂ ಹ್ಯಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಮಾಜಿ ಸಿಇಸಿ ಅಶೋಕ್ ಲವಾಸಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಪ್ರಹ್ಲಾದ್ ಪಟೇಲ್ ಮತ್ತು ಪಿಕೆ ಅವರ ಆಪ್ತರ ಫೋನ್ ಸಂಖ್ಯೆಗಳು ಸಹ ಪಟ್ಟಿಯಲ್ಲಿವೆ ಎಂದು ದಿ ವೈರ್ ವರದಿ ಮಾಡಿದೆ. ಪೆಗಾಸಸ್‌ನೊಂದಿಗಿನ ಹ್ಯಾಕಿಂಗ್ ಸಂಬಂಧದ ಲೇಖನಗಳು ಉದ್ದೇಶಪೂರ್ವಕವಾಗಿ ಬರುತ್ತಿವೆ ಎಂದು ಕೇಂದ್ರ ಐಟಿ ಸಚಿವರು ಲೋಕಸಭೆಗೆ ತಿಳಿಸಿದ್ದಾರೆ.