ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣದ ಕುರಿತಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಇಂದಿನ ವಿಚಾರಣೆಯಿಂದ ರಾಹುಲ್ ಅವರು ವಿನಾಯಿತಿ ಕೋರಿದ ಹಿನ್ನೆಲೆಯಲ್ಲಿ ಬಿಡುವು ನೀಡಲಾಗಿತ್ತು. ಇದೀಗ ಅವರ ತಾಯಿ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣಕ್ಕಾಗಿ ಇನ್ನೂ 4 ದಿನ ವಿಚಾರಣೆಯಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆಯೇ ರಾಹುಲ್ ಗಾಂಧಿ ಅವರನ್ನು ಇಡಿ ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ 2 ಸಾವಿರ ಕೋಟಿ ಅಕ್ರಮದ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದೆ. ಜೂನ್ 13 ರಿಂದ ಸತತ ಮೂರು ವಿಚಾರಣೆಗೆ ಹಾಜರಾಗಿದ್ದ ರಾಹುಲ್ ಇಂದಿನ ವಿಚಾರಣೆಯಿಂದ ವಿನಾಯಿತಿ ಕೋರಿದ್ದರು. ಇದಕ್ಕೆ ಅಧಿಕಾರಿಗಳು ಕೂಡ ಸಮ್ಮತಿಸಿ ನಾಳೆ ವಿಚಾರಣೆಗೆ ದಿನ ನಿಗದಿ ಮಾಡಿದ್ದರು.
ಇಂದು ವಿಚಾರಣಾ ರಜೆ ಪಡೆದ ರಾಹುಲ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ, ಇದೇ ವಿಚಾರವನ್ನು ಉಲ್ಲೇಖಿಸಿ ಜೂನ್ 17 ರಿಂದ 20 ರವರೆಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ತಮಗೆ ವಿನಾಯಿತಿ ನೀಡಬೇಕು ಎಂದು ಕೋರಿದ್ದಾರೆ. ಆದರೆ, ರಾಹುಲ್ರ ಈ ಮನವಿಗೆ ಇಡಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಹಗರಣದ ಕುರಿತು ನಡೆಸುತ್ತಿರುವ ವಿಚಾರಣೆಗೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೇ, ಇದು ದ್ವೇಷದ ರಾಜಕೀಯ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಪದವೀಧರ, ಶಿಕ್ಷಕರಂತಹ ವಿದ್ಯಾವಂತರ ಚುನಾವಣೆಯಲ್ಲೇ 11,499 ಮತಗಳು ತಿರಸ್ಕೃತ!