ನವದೆಹಲಿ: ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಸುತ್ತಲಿನ ಪರಿಸರ ಸೂಕ್ಷ್ಮ ವಲಯಗಳ (ಇಎಸ್‌ಜೆಡ್) ನಿರ್ವಹಣೆ ಕುರಿತು ಸುಪ್ರೀಂಕೋರ್ಟ್ ಆದೇಶದಿಂದ ಸಂತ್ರಸ್ತರ ಆತಂಕವನ್ನು ನಿವಾರಿಸಲು ಮುಂದಾಗಬೇಕೆಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕೇರಳದ ವಯನಾಡ್ ಸಂಸದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಧಾನಿಗೆ ತಾವು ಬರೆದ ಪತ್ರವನ್ನು ರಾಹುಲ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿನ ಸುಪ್ರೀಂಕೋರ್ಟ್ನ ಆದೇಶದಿಂದ ಕೇರಳದ ವಯನಾಡ್ನ ಸ್ಥಳೀಯ ಸಮುದಾಯಗಳ ಮೇಲೆ ಬೀರುವ ದುಃಸ್ಥಿತಿ ಮತ್ತು ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮದ ಬಗ್ಗೆ ಗಮನ ಸೆಳೆದಿದ್ದಾರೆ.
ಪರಿಸರ ಸೂಕ್ಷ್ಮ ವಲಯಗಳ ಸಂಬಂಧ ಕೇಂದ್ರೀಯ ಸಶಕ್ತ ಸಮಿತಿ (ಸಿಇಸಿ) ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮನವಿ ಮಾಡುವ ಮೂಲಕ ಸಹಾಯ ಮಾಡಬಹುದು. ಈ ಇಲಾಖೆಗಳು ನೀಡಿದ ನೀಡಿದ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.
ಇಎಸ್‌ಜೆಡ್ ಮಾರ್ಗಸೂಚಿಗಳು ಕೃಷಿ ವ್ಯವಸ್ಥೆಗಳ ಬದಲಾವಣೆ, ಬೆಟ್ಟದ ಇಳಿಜಾರುಗಳ ರಕ್ಷಣೆ ಮತ್ತು ವಿದ್ಯುತ್ ಕೇಬಲ್‌ಗಳ ಸ್ಥಾಪನೆ ಸೇರಿದಂತೆ ಹಲವಾರು ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಪಶ್ಚಿಮ ಘಟ್ಟಗಳಲ್ಲಿನ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಇಂತಹ ನಿರ್ಬಂಧಗಳು ಸ್ಥಳೀಯ ಸಮುದಾಯಗಳು ತಮ್ಮ ಜೀವನ ಮಟ್ಟವನ್ನು ಸುಧಾರಿಸುವುದಕ್ಕೆ ಅಡ್ಡಿಪಡಿಸುತ್ತವೆ. ಜೊತೆಗೆ ಯಾವುದೇ ಶಾಶ್ವತ ಯೋಜನೆಗಳಿಗೆ ಇಎಸ್ಜೆಡ್ನಲ್ಲಿ ಅವಕಾಶ ಇಲ್ಲ. ಇದರಿಂದ ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿದೆ ಎಂದು ರಾಹುಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ವಯನಾಡ್ನ ರಾಹುಲ್ ಗಾಂಧಿ ಕಚೇರಿಗೆ ನುಗ್ಗಿ ಎಸ್‌ಎಫ್‌ಐ ಕಾರ್ಯಕರ್ತರ ದಾಂಧಲೆ