ಚೆನ್ನೈ: ರ್‍ಯಾಗಿಂಗ್ ನಿಷೇಧದ ನಡುವೆಯೂ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ರ್‍ಯಾಗ್ ಮಾಡಿರುವ ಘಟನೆ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ನಲ್ಲಿ ನಡೆದಿದೆ. ಪ್ರಥಮ ವರ್ಷದ ಸುಮಾರು 40 ವಿದ್ಯಾರ್ಥಿಗಳನ್ನು ಅರೆಬೆತ್ತಲೆಗೊಳಿಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ದೌರ್ಜನ್ಯ ಎಸಗಿರುವ ವಿಡಿಯೋ ಬೆಳೆಕಿಗೆ ಬಂದಿದೆ. ಈ ಘಟನೆ ಸಂಬಂಧ ಕಾಲೇಜು ಆಡಳಿತ 7 ಜನ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. ಅಲ್ಲದೇ, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ವೈದ್ಯಕೀಯ ಕಾಲೇಜುಗಳಲ್ಲಿ ರ್‍ಯಾಗಿಂಗ್ ತಡೆ ಜಾರಿಗೆ ಪ್ರೊಫೆಸರ್ ಮುಂದಾಳತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಂಬಂಧ ಮಾತನಾಡಿರುವ ಸರ್ಕಾರಿ ಕಿಲ್ಪೌಕ್ ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಶಾಂತಿಮಲರ್, ಪ್ರಥಮ ವರ್ಷದ ತರಗತಿಗಳು ಆರಂಭವಾಗಿದೆ. ಪ್ರೊಫೆಸರ್ ಮುಂದಾಳತ್ವದಲ್ಲಿ ಸಮಿತಿ ರಚಿಸಲಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗದರ್ಶನದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ. 25 ಕಡೆ ಎಲ್ಲ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಅದರ ಲಿಂಕ್ ಅನ್ನು ನ್ಯಾಷನಲ್ ಮೆಡಿಕಲ್ ಕಮಿಷನ್ಗೆ ನೀಡಲಾಗಿದೆ.
ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ್ಯಾಗ್ ಮಾಡಿದರೆ ತಕ್ಷಣಕ್ಕೆ ತಿಳಿಸುವಂತೆ ಪ್ರೊಫೆಸರ್ ಕಾಂಟಕ್ಟ್ ನಂಬರ್ಗಳನ್ನು ಕೂಡ ನೀಡಲಾಗಿದೆ. ಇದರ ಅನುಸಾರ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. ಮೊದಲು ಘಟನೆ ಸಂಬಂಧ ತನಿಖೆ ನಡೆಸಿ ಬಳಿಕ ಅಮಾನತು ಮಾಡಲಾಗುವುದು. ಒಂದು ವೇಳೆ ದೂರು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಹೋದರೆ, ಇದನ್ನು ಮತ್ತೆ ತನಿಖೆ ಮಾಡಲಾಗುವುದು. ಅನರ್ಹತೆ ಕ್ರಮ ನಡೆಸಲಾಗುವುದು. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ.
ಚೆನ್ನೈ ಒಮನ್ದೂರ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಜಯಂತಿ ಮಾತನಾಡಿ, ತರಗತಿಗಳು ಶುರುವಾಗಿದ್ದು, ರ್‍ಯಾಗಿಂಗ್ ಮತ್ತು ಶಿಕ್ಷೆ ಕುರಿತು ತಿಳಿಸಿ ಹೇಳಲಾಗಿದೆ. ರ್‍ಯಾಗಿಂಗ್ ತಡೆಗೆ ಸಮಿತಿ ಮಾಡಲಾಗಿದೆ. ಈ ಸಂಬಂಧ ತರಗತಿ ಮತ್ತು ಹಾಸ್ಟೆಲ್ನಲ್ಲಿ ಮಾಹಿತಿ ಅಂಟಿಸಲಾಗಿದೆ. ಪೋಷಕರು ಕೂಡ ಪ್ರತಿ ನಿತ್ಯ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಅವರಿಗೆ ಸಮಸ್ಯೆ ಇದ್ದರೆ ಆಲಿಸುವಂತೆ ಸಲಹೆ ನೀಡಲಾಗಿದೆ. ಸಮಸ್ಯೆ ಕಂಡು ಬಂದಾಕ್ಷಣ ಪ್ರೊಫೆಸರ್ ಮತ್ತು ಪ್ರಾಂಶುಪಾಲರಿಗೆ ತಿಳಿಸಿ, ಅವರಿಗೆ ಶಿಕ್ಷೆ ಕೊಡಿಸಲಾಗುವುದು ಎಂದರು.
ಇದನ್ನೂ ಓದಿ: ಡಚ್ ನಾಡಿನಲ್ಲಿ ದೋಸೆ ಹಿಟ್ಟು ಉದ್ಯಮ ಆರಂಭಿಸಿ ಹಿಟ್ ಆದ ಕೇರಳದ ದಂಪತಿ