ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸುವಂತೆ ಕೋರಿ, ಅವರ ತಾಯಿ ರಬಿಯಾ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. 2013 ರಲ್ಲಿ ನಟಿ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ವು ಈ ಪ್ರಕಣದ ತನಿಖೆ ನಡೆಸಿತ್ತು.
ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಎಂಎನ್ ಜಾಧವ್ ಅವರ ವಿಭಾಗೀಯ ಪೀಠವು ಪ್ರಕರಣದ ತನಿಖೆ ನಡೆಸಿದ ಸಂಸ್ಥೆಯ ಮೇಲೆ ನಂಬಿಕೆ ಇದೆ ಎಂದು ಹೇಳಿದೆ. ಜಿಯಾ ಖಾನ್ ಅವರ ಗೆಳೆಯ ನಟ ಸೂರಜ್ ಪಾಂಚೋಲಿ ಅವರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿಬಂದಿತ್ತು. 25 ವರ್ಷದ ನಟಿ ಜೂನ್ 3, 2013 ರಂದು ತಮ್ಮ ಮುಂಬೈ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ರಬಿಯಾ ಖಾನ್ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, ಯುನೈಟೆಡ್ ಸ್ಟೇಟ್ಸ್‌ನ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಸಹಾಯದಿಂದ ಸ್ವತಂತ್ರ ಮತ್ತು ವಿಶೇಷ ಏಜೆನ್ಸಿಯಿಂದ ಪ್ರಕರಣದ ಹೊಸ ತನಿಖೆಯನ್ನು ಕೋರಿದ್ದರು. ರಬಿಯಾ ಖಾನ್ ಪ್ರಕಾರ, ಆಕೆಯ ಮಗಳನ್ನು ಕೊಲೆ ಮಾಡಲಾಗಿದೆ.
ಈ ಪ್ರಕರಣವನ್ನು ಮೊದಲು ಮುಂಬೈ ಪೊಲೀಸರು ತನಿಖೆ ಮಾಡಿದ್ದರು. ಆದರೆ ಅವರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ರಾಬಿಯಾ ಖಾನ್ ವಕೀಲರಾದ ಶೇಖರ್ ಜಗತಾಪ್ ಮತ್ತು ಸಾಯಿರುಚಿತಾ ಚೌಧರಿ ಮೂಲಕ ಹೈಕೋರ್ಟ್‌ಗೆ ತೆರಳಿದ್ದರು. ಅಲ್ಲಿ ತನಿಖೆಯನ್ನು ಜುಲೈ 2014 ರಲ್ಲಿ ಸಿಬಿಐಗೆ ವರ್ಗಾಯಿಸಲಾಯಿತು.
ಇದನ್ನೂ ಓದಿ: 8 ವರ್ಷದ ಬಳಿಕ ನಟಿ ಜಿಯಾ ಖಾನ್ ನಿಗೂಢ ಸಾವಿನ ತನಿಖೆಗೆ ಮುಂದಾದ ಸಿಬಿಐ ವಿಶೇಷ ನ್ಯಾಯಾಲಯ
ಈಗ ಕೇಂದ್ರ ತನಿಖಾ ಸಂಸ್ಥೆ ಕೂಡ ಅದೇ ರೀತಿ ಸರಿಯಾಗಿ ತನಿಖೆ ಮಾಡಿಲ್ಲ. ಹಾಗಾಗಿ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಇಂತಹ ಮನವಿಯನ್ನು ಸಲ್ಲಿಸುವ ಮೂಲಕ ಅರ್ಜಿದಾರರು ತಮ್ಮ ಪ್ರಕರಣವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಸಿಬಿಐ ಪರವಾಗಿ ವಾದ ಮಂಡಿಸಿದ ವಕೀಲ ಸಂದೇಶ್ ಪಾಟೀಲ್ ಅವರು, ಪ್ರಧಾನ ಸಂಸ್ಥೆ ಪ್ರಕರಣವನ್ನು ನ್ಯಾಯಯುತವಾಗಿ ತನಿಖೆ ಮಾಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪೀಠವು ರಬಿಯಾ ಖಾನ್ ಅವರ ಮನವಿಯನ್ನು ವಜಾಗೊಳಿಸಿತು ಮತ್ತು ವಿವರವಾದ ಆದೇಶವನ್ನು ನಂತರ ನೀಡುವುದಾಗಿ ಹೇಳಿದೆ.