ತಿರುವನಂತಪುರಂ (ಕೇರಳ): ವಿಶ್ವದ ಶ್ರೀಮಂತ ದೇವಾಲಯವಾದ ಕೇರಳದ ತಿರುವನಂತಪುರಂನ ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ಖಾಸಗಿ ಹೆಲಿಕಾಪ್ಟರ್ವೊಂದು ಹಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಜುಲೈ 28ರಂದು ದೇಗುಲದ ಮೇಲೆ ಐದು ಬಾರಿ ಹೆಲಿಕಾಪ್ಟರ್ ಸುತ್ತು ಹಾಕಿದ್ದು, ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಅನಧಿಕೃತ ಖಾಸಗಿ ಹೆಲಿಕಾಪ್ಟರ್ ದೇವಸ್ಥಾನದ ಮೇಲೆ ಹಾರಾಟ ಮಾಡಿದ್ದು, ಭದ್ರತಾ ಲೋಪ ಎಂದು ಹಿಂದೂ ಸಂಘಟನೆಗಳು ಹಾಗೂ ದೇವಾಲಯದ ಆಡಳಿತ ಮಂಡಳಿ ಆರೋಪಿಸಿದೆ. ಈ ಕುರಿತು ತನಿಖೆ ನಡೆಸಲು ಕೇಂದ್ರೀಯ ಸಂಸ್ಥೆಗೆ ವಹಿಸಬೇಕೆಂದು ಆಡಳಿತ ಮಂಡಳಿ ಸದಸ್ಯ ಕುಮ್ಮನಂ ರಾಜಶೇಖರನ್ ಒತ್ತಾಯಿಸಿದ್ದಾರೆ.
ನಡೆದಿದ್ದೇನು?: ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ಜುಲೈ 28ರಂದು ರಾತ್ರಿ 7 ಗಂಟೆ ಸುಮಾರಿಗೆ ಖಾಸಗಿ ಹೆಲಿಕಾಪ್ಟರ್ ಐದು ಬಾರಿ ಹಾರಾಟ ಮಾಡಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಸಿಹೆಚ್ ನಾಗರಾಜು ಮತ್ತು ತಂಡ ತನಿಖೆ ಕೈಗೊಂಡಿದೆ.
ಇದರ ಭಾಗವಾಗಿ ತಿರುವನಂತಪುರಂ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ವಿಭಾಗ ದಕ್ಷಿಣ ವಾಯು ಪಡೆಯ ಕಮಾಂಡ್ ಕಚೇರಿಯನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಆಗ ದೇವಸ್ಥಾನದ ಮೇಲೆ ಹಾರಾಟ ಮಾಡಿದ ಹೆಲಿಕಾಪ್ಟರ್ ಖಾಸಗಿ ವಿಮಾನಯಾನ ಕಂಪನಿಗೆ ಸೇರಿದೆ ಎಂಬುದು ಗೊತ್ತಾಗಿದೆ.
ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ವಿಮಾನಗಳು ಹಾಗೂ ಹೆಲಿಕಾಪ್ಟರ್ಗಳ ಹಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಡ್ರೋನ್ಗಳಿಗೆ ಮಾತ್ರ ನಿಷೇಧ ಹೇರಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಆಧಾರದ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಹಾರಾಟ ನಿರ್ಬಂಧಕ್ಕೆ ಶಿಫಾರಸು: ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ದೇವಸ್ಥಾನದ ಮೇಲೆ ಹೆಲಿಕಾಪ್ಟರ್ಗಳ ಹಾರಾಟಕ್ಕೆ ಸಂರ್ಪೂಣ ನಿರ್ಬಂಧ ಹೇರಬೇಕೆಂದು ಪೊಲೀಸ್ ಆಯುಕ್ತರು ಶಿಫಾರಸು ಮಾಡಿದ್ದಾರೆ. ಈ ಶಿಫಾರಸನ್ನು ರಾಜ್ಯ ಸರ್ಕಾರದ ಮೂಲಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ (ಡಿಜಿಸಿಎ) ಸಲ್ಲಿಸಲು ತೀರ್ಮಾನಿಸಲಾಗಿದೆ.
ಇದೇ ವೇಳೆ, ಪದ್ಮನಾಭ ಸ್ವಾಮಿ ದೇವಸ್ಥಾನವು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿದೆ. ಹೀಗಾಗಿ ವಿಮಾನಗಳ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಡಿಜಿಸಿಎ ಹೇಳಿದೆ. ಆದರೆ, ಹಾಲಿಕಾಪ್ಟರ್ಗಳ ನಿರ್ಬಂಧಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಇದರ ಆಧಾರದ ಮೇಲೆ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದಾರೆ.
ಪದ್ಮನಾಭ ಸ್ವಾಮಿ ದೇವಸ್ಥಾನವನ್ನು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾಗಿದೆ. ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸುಪ್ರೀಂ ಕೋರ್ಟ್ ಹೈಸೆಕ್ಯುರಿಟಿ ವಲಯ ಎಂದು ಘೋಷಿಸಿದೆ. ಜೊತೆಗೆ ದೇವಸ್ಥಾನದ ಚಟುವಟಿಕೆಗಳನ್ನು ಸುಪ್ರೀಂ ಮೇಲ್ವಿಚಾರಣೆ ಮಾಡುತ್ತಿದೆ. ದೇವಸ್ಥಾನದ ಭದ್ರತೆಗಾಗಿ 200ಕ್ಕೂ ಹೆಚ್ಚು ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಶ್ರೀ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ವಿಸ್ಮಯ.. ಗೋಪುರದ ಕಿಂಡಿಗಳ ಮೂಲಕ ಹಾದು ಹೋಗುವ ಸೂರ್ಯ