ಗುರುದಾಸ್‌ಪುರ (ಪಂಜಾಬ್): ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟುವಾದ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೇಶಾದ್ಯಂತ ತಮ್ಮ ಸಮಯವನ್ನು ಕಳೆಯುತ್ತಿರುವುದರಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ. ಕೆಲವೊಮ್ಮೆ ಭಗವಂತ್ ಮಾನ್ ಮುಖ್ಯಮಂತ್ರಿಯೋ ಅಥವಾ ಪೈಲಟ್ ಎನ್ನುವಷ್ಟು ಆಶ್ಚರ್ಯವಾಗುತ್ತದೆ ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗುರುದಾಸ್‌ಪುರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಾ, ನನ್ನ ಇಡೀ ಜೀವನದಲ್ಲಿ ಎಎಪಿ ನೇತೃತ್ವದಂತಹ ಪೊಳ್ಳು ಭರವಸೆಗಳನ್ನು ನೀಡುವ ಸರ್ಕಾರವನ್ನು ನಾನು ನೋಡಿಲ್ಲ ಎಂದು ಟೀಕಾ ಪ್ರಹಾರ ಮಾಡಿದ್ದಾರೆ.
ಇದನ್ನೂ ಓದಿ: Adipurush ವಿವಾದ: ಜನರ ಭಾವನೆಗಳಿಗೆ ಧಕ್ಕೆ.. ಛತ್ತೀಸ್‌ಗಢದಲ್ಲಿ ಚಿತ್ರ ನಿಷೇಧಿಸುವ ಭರವಸೆಯಿದೆ ಎಂದ ಕೇಂದ್ರ ಸಚಿವೆ
ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಕೇಂದ್ರ ಸಚಿವರು, ಮುಖ್ಯಮಂತ್ರಿಗೆ ಒಂದೇ ಕೆಲಸವಿದೆ. ಕೇಜ್ರಿವಾಲ್ ಚೆನ್ನೈಗೆ ಹೋಗಬೇಕಾದರೆ ಅವರನ್ನು ಚೆನ್ನೈಗೆ ಕರೆದೊಯ್ಯಲು ವಿಮಾನದಲ್ಲಿ ದೆಹಲಿಗೆ ಹೋಗುತ್ತಾರೆ. ಅವರು (ಕೇಜ್ರಿವಾಲ್) ಕೋಲ್ಕತ್ತಾಗೆ ಹೋಗಬೇಕಾದರೆ, ಮತ್ತೆ ಅವರು (ಭಗವಂತ್ ಮನ್) ವಿಮಾನವನ್ನು ತೆಗೆದುಕೊಂಡು ಅವರನ್ನು ಕೋಲ್ಕತ್ತಾಗೆ ಕರೆದೊಯ್ಯುತ್ತಾರೆ. ಕೇಜ್ರಿವಾಲ್ ಅವರ ದೇಶವ್ಯಾಪಿ ಪ್ರವಾಸವನ್ನು ಪಂಜಾಬ್ ಮುಖ್ಯಮಂತ್ರಿಯವರೇ ನಡೆಸುತ್ತಾರೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ಭಗವಂತ್ ಮಾನ್ ಮುಖ್ಯಮಂತ್ರಿಯೋ ಅಥವಾ ಪೈಲಟ್ ಎಂದು ಆಗಾಗ ನನಗೆ ಆಶ್ಚರ್ಯವಾಗುತ್ತದೆ. ಅವರ ಸಂಪೂರ್ಣ ಸಮಯವನ್ನು ಕೇಜ್ರಿವಾಲ್ ಅವರ ಪ್ರವಾಸಗಳು ಕಸಿದುಕೊಳ್ಳುತ್ತಿವೆ. ಇದರ ಪರಿಣಾಮವಾಗಿ ಪಂಜಾಬ್‌ನ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ. ಇಲ್ಲಿ ಜನರು ಸುರಕ್ಷಿತವಾಗಿಲ್ಲ. ಡ್ರಗ್ಸ್ ವ್ಯಾಪಾರ ಹೆಚ್ಚುತ್ತಿರುವಾಗ ಮುಖ್ಯಮಂತ್ರಿಗಳಿಗೆ ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕಾಗಲಿ ಅಥವಾ ರೈತರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕಾಗಲಿ ಸಮಯವಿಲ್ಲ ಎಂದು ಟೀಕಿಸಿದ್ದಾರೆ.
ಮುಂದುವರೆದು, ಆಮ್ ಆದ್ಮಿ ಪಕ್ಷದ ಚುನಾವಣಾ ಭರವಸೆಗಳ ಬಗ್ಗೆಯೂ ವಾಗ್ದಾಳಿ ನಡೆಸಿದ ಅಮಿತ್ ಶಾ, ನಾನು ಭಗವಂತ್ ಮಾನ್ ಮತ್ತು ಕೇಜ್ರಿವಾಲ್ ಅವರನ್ನು ಕೇಳಲು ಬಯಸುತ್ತೇನೆ. ನೀವು ರಾಜ್ಯದ ಪ್ರತಿಯೊಬ್ಬ ಮಹಿಳೆಗೆ 1,000 ರೂ. ಭರವಸೆ ನೀಡಿದ್ದೀರಿ. ಆದರೆ, ಮಹಿಳೆಯರು ಈ ಹಣಕ್ಕಾಗಿ ಇನ್ನೂ ಕಾಯುತ್ತಿದ್ದಾರೆ. 1,000 ರೂ. ಮಾತನಾಡುವುದು ಇರಲಿ, ಮಹಿಳೆಯರ ಖಾತೆಗೆ 1,000 ಪೈಸೆ ಕೂಡ ವರ್ಗಾವಣೆಯಾಗಿಲ್ಲ ಎಂದು ವಾಗ್ಬಾಣ ಬಿಟ್ಟಿದ್ದರು.
ಇದೇ ವೇಳೆ, ಒಂಬತ್ತು ವರ್ಷಗಳಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿವಿಧ ಸಾಧನೆಗಳನ್ನು ಪಟ್ಟಿ ಮಾಡಿದರು. ಸಮಾವೇಶದಲ್ಲಿ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅರ್ಜುನ್ ರಾಮ್ ಮೇಘವಾಲ್ ಮತ್ತು ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಿದ್ದರು.
ಇದನ್ನೂ ಓದಿ: Mann Ki Baat: ತುರ್ತು ಪರಿಸ್ಥಿತಿ ಅವಧಿ ದೇಶದ ಇತಿಹಾಸದಲ್ಲಿ ಕರಾಳ ಯುಗ: ಪ್ರಧಾನಿ ಮೋದಿ