ಮೊಹಾಲಿ(ಪಂಜಾಬ್): ಪಂಜಾಬ್ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ(ಎಎಪಿ) ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ಸದಾ ಒಂದಿಲ್ಲೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗುವ ಕೆಲಸ ಮಾಡ್ತಿದೆ. ಸದ್ಯ ಅಂತಹ ಮತ್ತೊಂದು ನಿರ್ಧಾರ ಕೈಗೊಂಡಿದೆ.
ಎಲ್ಲವೂ ರಾಜ್ಯ ಸರ್ಕಾರದ ಯೋಜನೆಯಂತೆ ನಡೆದರೆ, ಪಂಜಾಬ್ ವಿವಿಧ ವಸ್ತುಗಳನ್ನು ರಫ್ತು ಹಾಗೂ ಆಮದು ಮಾಡಿಕೊಳ್ಳಲು ಸ್ವಂತ ಗೂಡ್ಸ್ ರೈಲುಗಳನ್ನ ಹೊಂದಲಿದೆ. ಜೊತೆಗೆ ತನ್ನದೇ ಆದ ಗೂಡ್ಸ್ ರೈಲುಗಳನ್ನ ಹೊಂದಿರುವ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. ರಾಜ್ಯದ ರಫ್ತುದಾರರು ಮತ್ತು ಆಮದುದಾರರ ಬಂಡವಾಳ ಉಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಕೈಹಾಕಿದೆ.
350 ಕೋಟಿ ರೂ. ನೀಡಿ ಗೂಡ್ಸ್ ರೈಲು ಖರೀದಿ: ಅಸೋಚಾಮ್ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ 'ವಿಷನ್ ಪಂಜಾಬ್' ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿರುವ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯದ ವಿವಿಧ ಸಾಮಗ್ರಿಗಳ ರಫ್ತು, ಆಮದು ಮಾಡಿಕೊಳ್ಳಲು ಮೂರು ಗೂಡ್ಸ್ ರೈಲು ಖರೀದಿಸುವ ಬಗ್ಗೆ ಆಲೋಚನೆಯಲ್ಲಿದ್ದೇವೆ. ಪ್ರತಿ ರೈಲಿಗೆ ಸುಮಾರು 350 ಕೋಟಿ ರೂ. ನೀಡಲು ಯೋಜಿಸುತ್ತಿದ್ದೇವೆ. ಈ ಉದ್ದೇಶಕ್ಕಾಗಿ ಶೇ. 3ರ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕೈಗಾರಿಕೋದ್ಯಮಿಗಳಿಗೆ ಮಹತ್ವದ ಆಫರ್ ನೀಡಿರುವ ಭಗವಂತ್ ಮಾನ್, ಉದ್ಯಮಿಗಳು ಹೂಡಿಕೆ ಮಾಡಲು ಪಂಜಾಬ್ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿಕೊಡಲಿದ್ದು, ನಮ್ಮೊಂದಿಗೆ ಮುಕ್ತವಾಗಿ ಮಾತನಾಡಬಹುದಾಗಿದೆ ಎಂದು ಮುಕ್ತ ಆಹ್ವಾನವನ್ನು ನೀಡಿದ್ದಾರೆ.
ಇದೇ ವೇಳೆ, ಅಮೃತಸರ ಮತ್ತು ಮೊಹಾಲಿಯಿಂದ ನೇರ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಲು ಪ್ರಮುಖ ವಿಮಾನಯಾನ ಸಂಸ್ಥೆ ಜೊತೆ ಮಾತುಕತೆ ನಡೆಸಿದ್ದಾಗಿ ಭಗವಂತ್ ಮಾನ್ ತಿಳಿಸಿದರು. ಅಮೃತಸರ ಮತ್ತು ಮೊಹಾಲಿಯಿಂದ ಇಂಗ್ಲೆಂಡ್, ವ್ಯಾಂಕೋವರ್, ಟೊರೊಂಟೊ, ಸಿಲಿಕಾನ್ ವ್ಯಾಲಿ ಮತ್ತು ಚಿಕಾಗೋಗೆ ನೇರ ವಿಮಾನ ಸಂಪರ್ಕ ಕಲ್ಪಿಸುವ ಇರಾದೆ ಇದೆ ಎಂದರು.
ಮುಖ್ಯವಾಗಿ ಏರ್ ಇಂಡಿಯಾ, ವಿಸ್ತಾರಾ, ಬ್ರಿಟಿಷ್ ಏರ್‌ವೇಸ್ ಮತ್ತು ಏರ್ ಕೆನಡಾದೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದರು. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದ್ದು, ಉದಯಪುರ ಸರೋವರ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಮಾನ್ ವಿವರಿಸಿದರು.