ನವದೆಹಲಿ : ಪ್ರಧಾನಿ ಮೋದಿ ಅವರಿಗೆ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರ ಕೇಂದ್ರ ಗೃಹ ವ್ಯವಹಾರಗಳ ಇಲಾಖೆಗೆ ವರದಿಯನ್ನು ಸಲ್ಲಿಸಿದೆ. ಮೋದಿ ಅವರ ಭದ್ರತೆಗೆ ಸಂಬಂಧಿಸಿದಂತೆ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.
ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಅವರು ಜನವರಿ 5ರಂದು ಫಿರೋಜ್‌ಪುರದಲ್ಲಿ ಪ್ರಧಾನಿ ಮೋದಿಗೆ ಆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಭದ್ರತಾ ಜವಾಬ್ದಾರಿಯನ್ನು ಹೊತ್ತಿರುವ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ವರದಿಯನ್ನು ತಯಾರು ಮಾಡಲಾಗಿದೆ. ಪ್ರಧಾನಿಯವರು ಆಗಮಿಸಿದ್ದ ಸಮಯದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಗಳಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿನೆ ಮಾಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ವರದಿಯಲ್ಲಿ ಏನಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಗುರುವಾರವಷ್ಟೇ ಕೇಂದ್ರ ಗೃಹ ಇಲಾಖೆ ಪ್ರಧಾನಿಗೆ ಭದ್ರತಾ ಲೋಪ ವಿಚಾರಕ್ಕೆ ಕುರಿತಂತೆ ತನಿಖೆ ನಡೆಸಲು ಸಮಿತಿಯೊಂದನ್ನು ರಚನೆ ಮಾಡಿತ್ತು.
ಈ ಸಮಿತಿಯ ನೇತೃತ್ವವನ್ನು ಸಂಪುಟ ಸಚಿವಾಲಯದ ಕಾರ್ಯದರ್ಶಿ (ಭದ್ರತೆ) ಸುಧೀರ್ ಕುಮಾರ್ ಸಕ್ಸೇನಾ ವಹಿಸಿಕೊಂಡಿದ್ದು, ಇಂಟೆಲಿಜೆನ್ಸ್ ಬ್ಯೂರೋದ ಜಂಟಿ ನಿರ್ದೇಶಕ ಬಲ್ಬೀರ್ ಸಿಂಗ್ ಮತ್ತು ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ನ ಐಜಿ ಸುರೇಶ್ ಅವರು ಸದಸ್ಯರಾಗಿದ್ದಾರೆ.
ಮತ್ತೊಂದೆಡೆ ಪಂಜಾಬ್ ಸರ್ಕಾರವೂ ಕೂಡ ತನಿಖಾ ಸಮಿತಿಯೊಂದನ್ನು ಗುರುವಾರ ರಚನೆ ಮಾಡಿದೆ. ಮೂರು ದಿನದಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:Jammu Encounter: ಮೂವರು ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆ